Site icon Vistara News

Boycott of Election: ಚುನಾವಣೆ ಬಹಿಷ್ಕರಿಸಲು ಕೂಡ್ಲಿ ಮಠ ಆಸುಪಾಸಿನ ರೈತರ ತೀರ್ಮಾನ: ದಿನೇಶ್ ಶಿರವಾಳ

President of Taluk Raitha Sangha Dinesh Shirawala sagara

#image_title

ಸಾಗರ: “ಕೂಡ್ಲಿ ಮಠದ ಸಮೀಪ ವಾಸವಾಗಿರುವ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಕೂಡ್ಲಿ ಮಠದ ಆಡಳಿತ ಮಂಡಳಿ ಪರವಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿಂತಿದ್ದಾರೆ. ಈ ಕ್ರಮವನ್ನು ಖಂಡಿಸಿ ಕೂಡ್ಲಿ ಮಠ ಆಸುಪಾಸು ವಾಸವಿರುವ ರೈತರು ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ (Boycott of Election) ತೀರ್ಮಾನ ಕೈಗೊಂಡಿದ್ದಾರೆ” ಎಂದು ತಾಲೂಕು ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಸ್ಥಾಪಿತ) ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ (ಮಾ.9) ಮಾತನಾಡಿದ ಅವರು, “ಕೂಡ್ಲಿ ಮಠ ಆಸುಪಾಸು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಆಡಳಿತ ಮಂಡಳಿಯ ವಿರುದ್ಧ ಕಳೆದ ಆರು ತಿಂಗಳಿನಿಂದ ರೈತ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಸೇರಿದಂತೆ ಅನೇಕ ರೀತಿಯ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಮಠದ ಪರವಾಗಿ ನಿಂತಿದ್ದಾರೆಯೇ ವಿನಃ ನೊಂದ ರೈತರ ಪರವಾಗಿಲ್ಲ” ಎಂದು ದೂರಿದರು.

ಇದನ್ನೂ ಓದಿ: Lokayukta Raid: ಬಿಜೆಪಿ ಟಿಕೆಟ್‌ ಆಕಾಂಕ್ಷೆಗೂ ಸಿಜೆಐ ಪತ್ರಕ್ಕೂ ಸಂಬಂಧವಿಲ್ಲ: ಮಾಡಾಳ್‌ ಪ್ರಕರಣದ ಕುರಿತು ವಿವೇಕ್‌ ರೆಡ್ಡಿ ಹೇಳಿಕೆ

“ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಮಡಿವಾಳ, ಒಕ್ಕಲಿಗ ಮತ್ತು ಬಳೆಗಾರ ಸಮುದಾಯದ 1500ಕ್ಕೂ ಹೆಚ್ಚು ಮತದಾರರು ಚುನಾವಣೆ ಬಹಿಷ್ಕಾರ ನಿರ್ಧಾರವನ್ನು ಕೈಗೊಂಡಿದ್ದು, ಇದಕ್ಕೆ ರೈತ ಸಂಘ ಬೆಂಬಲ ನೀಡುತ್ತಿದೆ. ಕೂಡ್ಲಿ ಮಠದ ಆಸುಪಾಸು ಕೃಷಿ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದ ನೂರಾರು ರೈತ ಕುಟುಂಬವನ್ನು ಮಠದ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ರೈತರ ಬಾವಿ ಮುಚ್ಚಲಾಗಿದೆ. ಕೃಷಿ ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿ, ಅಡಕೆ, ಬಾಳೆ ಫಸಲನ್ನು ನಾಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಕೈಗೊಂಡಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಬೇಕು. ಒಂದೊಮ್ಮೆ ರೈತರಿಗೆ ನ್ಯಾಯ ಕೊಡದೆ ಹೋದಲ್ಲಿ ತಾಲೂಕಿನಾದ್ಯಂತ ಮತದಾನ ಬಹಿಷ್ಕಾರ ಸಂಬಂಧ ರೈತ ಸಂಘವು ಜಾಗೃತಿ ಮೂಡಿಸುತ್ತದೆ” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: WPL 2023 : ಆರ್​ಸಿಬಿ ಮಣಿಸಿದ ನಡುವೆಯೇ ಗುಜರಾತ್​ ಜಯಂಟ್ಸ್​ ತಂಡಕ್ಕೆ ಆಘಾತ, ನಾಯಕಿ ಟೂರ್ನಿಯಿಂದ ಔಟ್​​

“ನಗರದ ಇಂದಿರಾ ಗಾಂಧಿ ಕಾಲೇಜು ಪಕ್ಕದಲ್ಲಿರುವ ಸಂತೆ ಮಾರುಕಟ್ಟೆ ನಿರ್ಮಾಣವಾಗಿ ವರ್ಷ ಕಳೆಯುತ್ತಾ ಬಂದರೂ ಈತನಕ ಲೋಕಾರ್ಪಣೆ ಮಾಡಿಲ್ಲ. ಶಾಸಕರು, ನಗರಸಭೆ ಅಧ್ಯಕ್ಷರು ಒಂದೊಂದು ಕಾರಣ ಹೇಳುತ್ತಾ ಲೋಕಾರ್ಪಣೆಯನ್ನು ಮುಂದೂಡುತ್ತಾ ಬಂದಿದ್ದಾರೆ. ಸಂತೆ ಮಾರುಕಟ್ಟೆ ಲೋಕಾರ್ಪಣೆ ವಿಳಂಬವಾಗಲು ಕಾರಣ ಏನು ಎನ್ನುವುದನ್ನು ಶಾಸಕರು ಜನರಿಗೆ ತಿಳಿಸಬೇಕು. ಇನ್ನು ಆರೇಳು ದಿನಗಳಲ್ಲಿ ಸಂತೆ ಮಾರುಕಟ್ಟೆ ಲೋಕಾರ್ಪಣೆ ಮಾಡದೆ ಹೋದಲ್ಲಿ ರೈತ ಸಂಘವೇ ಉದ್ಘಾಟನೆ ಮಾಡುತ್ತದೆ” ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಮಡಿವಾಳ ಸಮಾಜದ ಸಹ ಕಾರ್ಯದರ್ಶಿ ವಿಘ್ನೇಶ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಯ್ಸಳ ಗಣಪತಿಯಪ್ಪ, ಪ್ರಮುಖರಾದ ಗಣಪತಿ, ಕೃಷ್ಣಪ್ಪ, ಮಂಜಪ್ಪ ಇನ್ನಿತರರು ಹಾಜರಿದ್ದರು.

Exit mobile version