Site icon Vistara News

Brahmashri Narayanaguru Jayanti: ಸಮ ಸಮಾಜದ ನಿರ್ಮಾಣ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

Brahmashri Narayanguru Jayanti

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅವರು (Brahmashri Narayanaguru Jayanti) ಪ್ರತಿಪಾದಿಸಿದಂತೆ ಎಲ್ಲರೂ ಮನುಷ್ಯರಾಗಿ ಗೌರವದಿಂದ ಬದುಕುವಂತಹ ಸಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ರವೀಂದ್ರಕಲಾ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಿ, ಸಾಮಾಜಿಕ ನ್ಯಾಯದ ಪರವಾದ ಸಮಾಜ ನಿರ್ಮಾಣಕ್ಕೆ ನಾವು ಬದ್ದರಾಗಿದ್ದೇವೆ. ಮನುಷ್ಯರಲ್ಲಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣ ಗುರುಗಳು ಹೇಳಿದರು. ಅದರಂತೆ ಪ್ರತಿಯೊಬ್ಬರೂ ಅನುಸರಿಸಿ ಬಾಳಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: World Senior Citizens Day: ವಿಶ್ವ ಹಿರಿಯ ನಾಗರಿಕರ ದಿನದ ಪ್ರಯುಕ್ತ ವೈದ್ಯರಿಂದ ಉಚಿತ ಸಮಾಲೋಚನೆ

ನಾರಾಯಣ ಗುರು ಅವರು ಈಡಿಗ ಜನಾಂಗದಲ್ಲಿ ಜನಿಸಿದ್ದರೂ, ಯಾವುದೇ ಧರ್ಮ, ಜಾತಿ, ಭಾಷೆಗೆ ಸೀಮಿತರಾಗಿದ್ದವರಲ್ಲ. ಅವರು ಬುದ್ಧ, ಬಸವ, ಕನಕದಾಸ ರೀತಿಯ ಸಂತರು. ಸಮಾಜದಲ್ಲಿ ಸುಧಾರಣೆ ಬಯಸಿ ಅದಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸಲಾಗುತ್ತಿದೆ ಎಂದರು.

ಎಷ್ಟೆ ಕಷ್ಟ ಬಂದರೂ ನಾವು ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಇದುವೇ ನಾರಾಯಣ ಗುರುವಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.

ಶೂದ್ರರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಅದರ ವಿರುದ್ಧ ಸಂಘರ್ಷಕ್ಕಿಳಿಯದೆ, ನಾರಾಯಣ ಗುರು ಅವರು ಅವರದ್ದೇ ಆದ ದೇವಾಲಯ ನಿರ್ಮಿಸಲು ಹಾಗೂ ಅರ್ಚಕರನ್ನು ನೇಮಿಸಲು ಕರೆ ನೀಡಿದರು. ಈ ರೀತಿ ಕೇರಳದಲ್ಲಿ 60ಕ್ಕೂ ಅಧಿಕ ದೇವಾಲಯ ಕಟ್ಟಿದರು. ಕರಾವಳಿಯಲ್ಲೂ ದೇವಾಲಯಗಳನ್ನು ನಿರ್ಮಿಸಿದರು. ಪ್ರವೇಶ ನಿರಾಕರಿಸುವ ದೇವಾಲಯಗಳಿಗೆ ಹೋಗಲೇ ಬೇಡಿ ಎಂದು ಹೇಳಿ ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮವನ್ನು ಪ್ರತಿಪಾದಿಸಿದರು.

ಇದನ್ನೂ ಓದಿ: Toyota Kirloskar Motor: ರಾಮನಗರ ಜಿಲ್ಲೆಯಲ್ಲಿ 3 ಹೊಸ ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ ಟಿಕೆಎಂ

ನಾರಾಯಣ ಗುರುಗಳು ಮೌಢ್ಯ, ಕಂದಾಚಾರಗಳ ವಿರುದ್ಧ ಬಸವಾದಿ ಶರಣರ ರೀತಿಯಲ್ಲಿ ಜಾಗೃತಿ ಮೂಡಿಸಿದರು. ಇಂದು ನಾವು ವಿದ್ಯಾವಂತರಾದರೂ ಮೌಢ್ಯಗಳನ್ನು ಬಿಟ್ಟಿಲ್ಲ. ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಲು ಪ್ರಯತ್ನವೇ ಮಾಡಿಲ್ಲ. ಏನಾದರೂ ಕಷ್ಟ ಬಂದ ತಕ್ಷಣ ಮೌಢ್ಯಗಳಿಗೆ ಶರಣಾಗುತ್ತೇವೆ. ತಮ್ಮ ಸಂಕಷ್ಟಗಳಿಗೂ ಕರ್ಮ ಸಿದ್ದಾಂತದ ಕಾರಣ ಹೇಳುತ್ತೇವೆ. ಸಂಕಷ್ಟ ಬಂದಾಗ ಹಣೆಯಲ್ಲಿ ಬರೆದದ್ದು, ಹಿಂದಿನ ಜನ್ಮದ ಕರ್ಮ ಎಂದು ಹೇಳುವುದು ಸರಿಯಲ್ಲ. ಅದೆಲ್ಲಾ ಸುಳ್ಳು. ಮೌಢ್ಯ, ಗೊಡ್ಡು ಸಂಪ್ರದಾಯ, ಕಂದಾಚಾರಗಳನ್ನು ನಂಬಬೇಡಿ. ನಾರಾಯಾಣ ಗುರು, ಬಸವಣ್ಣ ಹೇಳಿದ ರೀತಿ ನಡೆಯಿರಿ. ಕರ್ಮ ಸಿದ್ಧಾಂತದ ವಿರುದ್ಧ ಬಸವಾದಿ ಶರಣರೂ ಬೋಧನೆ ಮಾಡಿದರು. ಆದ್ದರಿಂದಲೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಿಸಿದ್ದೇವೆ.

ಕುವೆಂಪು ಅವರು, ಹುಟ್ಟುತ್ತಾ ಪ್ರತಿ ಮಗು ಕೂಡಾ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ಆದರೆ ಹಾಗೆ ಆಗಬಾರದು. ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

ಈಡಿಗರ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ ಶಿಥಿಲವಾಗಿದ್ದು, ಅದರ ನವೀಕರಣಕ್ಕೆ ಅನುದಾನ ಒದಗಿಸಲಾಗುವುದು. ಈಡಿಗರ ಸಮುದಾಯ ಭವನಕ್ಕೂ ಅನುದಾನ ನೀಡಲಾಗುವುದು. ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.

Exit mobile version