ಗದಗ: ರಾಜ್ಯದಲ್ಲಿ ಮುಂದಿನ ಸಿಎಂ ಆಗಿ ಬ್ರಾಹ್ಮಣರೊಬ್ಬರನ್ನು ಮಾಡುವ ಷಡ್ಯಂತ್ರ (Brahmin CM issue) ಬಿಜೆಪಿಯಲ್ಲಿ ನಡೆದಿದೆ ಎಂಬ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗದಗದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಜತೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಗದಗ ಜಿಲ್ಲಾ ಬ್ರಾಹ್ಮಣರ ಸಂಘದಿಂದ ಪ್ರತಿಭಟನೆ ನಡೆದಿದ್ದು, ನಗರದ ಗಾಂಧಿ ಸರ್ಕಲ್‌ನಲ್ಲಿ ಕುಮಾರಸ್ವಾಮಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ʻʻಬ್ರಾಹ್ಮಣ ಸಮಾಜ ಹಿಂದೂ ಧರ್ಮದ ಹೃದಯ ಇದ್ದಂತೆ. ಬ್ರಾಹ್ಮಣರು ಸಿಎಂ ಆದ್ರೆ ಕುಮಾರಸ್ವಾಮಿಗೇನು ತೊಂದರೆʼʼ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣರ ಪಾತ್ರ ದೊಡ್ಡದಿದೆ ಎಂದರು.
ʻʻಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ಕೋಡುಗೆ ಅಪಾರವಿದೆ. ಚಂದ್ರಶೇಖರ ಅಜಾದ್, ವೀರ ಸಾವರ್ಕರ್ ಬ್ರಾಹ್ಮಣ ಸಮಾಜದವರುʼʼ ಎಂದು ಹೇಳಿದ ಪ್ರತಿಭಟನಾಕಾರರು, ʻʻಕುಮಾರಸ್ವಾಮಿ ಹೇಳಿಕೆ ಅಖಂಡ ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅಪಮಾನ. ಹೀಗಾಗಿ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕುʼʼ ಎಂದು ಆಗ್ರಹಿಸಿದರು. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು.
ಕುಮಾರಸ್ವಾಮಿಗೆ ಶಾಸಕ ವೀರಣ್ಣ ಚರಂತಿಮಠ ಚಾಟಿ
ಈ ನಡುವೆ, ಬಾಗಲಕೋಟೆಯ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ʻʻಭಾರಿ ಜಾತ್ಯಾತೀತ ಅಂತ ಹೆಸರು ಇಟ್ಗೊಂಡಾರ. ಮತ್ತ ಈ ಜಾತಿ ಬಗ್ಗೆ ಯಾಕ್ ಮಾತಾಡ್ತಾರಾ?ʼʼ ಎಂದು ಅವರು ಕೇಳಿದರು.
ʻʻಯಾರಿಗೆ ಅರ್ಹತೆ ಇರುತ್ತದೆಯೋ ಅವರು ಸಿಎಂ ಆಗ್ತಾರೆ. ಅವರು ಜಾತಿಯ ಆಧಾರದಲ್ಲಿ ಮಾತಾಡುವುದು ಶೋಭೆ ತರುವುದಿಲ್ಲ. ಅವರು ಹತಾಶರಾಗಿ, ಮಾನಸಿಕ ಸ್ಥಿತಿ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಈ ರೀತಿ ಮಾತಾಡೋದು ಒಳ್ಳೆಯದಲ್ಲʼʼ ಎಂದರು.
ʻʻಬ್ರಾಹ್ಮಣರಲ್ಲಿ ಒಡಕು ಮೂಡಿಸುವುದು ತಪ್ಪು. ಜಾತಿ, ಉಪಜಾತಿ ಇದರ ಬಗ್ಗೆ ಮಾತಾಡಬಾರದು. ಇವೆಲ್ಲ ಸೂಕ್ಷ್ಮ ಇರುತ್ತವೆ. ಎಲ್ಲರಿಗೂ ಅವರವರ ಧರ್ಮ, ಮತ ದೊಡ್ಡದು. ರಾಜಕೀಯದಲ್ಲಿ ಇದ್ದವರು ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಕಲಿಯಬೇಕು. ಹತಾಶರಾಗಿ ಏನೇನೋ ಹೇಳಿಕೆ ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯಬಾರದುʼʼ ಎಂದು ಚರಂತಿಮಠ ಅಭಿಪ್ರಾಯಪಟ್ಟರು.
ಬ್ರಾಹ್ಮಣ ಸಿಎಂ ಹೇಳಿಕೆಯಿಂದ ಕುಮಾರಸ್ವಾಮಿ ಅವರಿಗೆ ರಾಜಕೀಯ ಲಾಭ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ʻʻರಾಜಕೀಯ ಲಾಭ ಏನೂ ಆಗುವುದಿಲ್ಲ. ಎಚ್ಡಿಕೆ ಹೇಳಿಕೆಯಿಂದ ಬಿಜೆಪಿಯಲ್ಲಿ ಏನೂ ಗೊಂದಲ ಆಗುವುದಿಲ್ಲ. ಹೈಕಮಾಂಡ್ ಸುಭದ್ರ, ಸ್ಟ್ರಾಂಗ್ ಇದೆ. ಎಲ್ಲ ರೀತಿಯಿಂದ ವಿಚಾರ ಮಾಡಿ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದಕ್ಕೆ ಎಲ್ಲರೂ ಬದ್ಧವಾಗಿ ಇರ್ತಾರೆʼʼ ಎಂದರು.
ʻʻಬ್ರಾಹ್ಮಣರು ಯಾಕೆ ಸಿಎಂ ಆಗಬಾರದು? ಅರ್ಹತೆ ಇದ್ದರೆ ಯಾಕ್ ಆಗಬಾರದು? ಹಿಂದೆ ಆಗಿಲ್ಲವೇ? ರಾಮಕೃಷ್ಣ ಹೆಗಡೆ, ಗುಂಡೂರಾಯರು ಆಗಿದ್ದಾರೆ. ಅನಂತಕುಮಾರ್ ಇದ್ದಿದ್ದರೆ ಅವರೂ ಆಗುತ್ತಿದ್ದರು. ಇವೆಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಷಯ. ನಮ್ಮ ಲೆವಲ್ ನಲ್ಲಿ ಚರ್ಚೆ ಆಗುವಂತವು ಅಲ್ಲʼʼ ಎಂದು ಹೇಳಿದರು.
ʻʻಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕ್ತಿದ್ದಾರೆʼʼ ಎಂಬ ಎಚ್‌ಡಿಕೆ ಹೇಳಿಕೆಗೆ ಚರಂತಿಮಠ ಗರಂ ಆಗಿದ್ದಾರೆ. ʻʻಯಾರೂ ಯಾರನ್ನು ಕಟ್ಟಿ ಹಾಕಿಲ್ಲ. ಕುಮಾರಸ್ವಾಮಿ ಏನೋ ಯಡಿಯೂರಪ್ಪ ಅವರ ಸಿಂಪತಿ ಪಡೆಯಲು ಹೇಳ್ತಿರಬೇಕು. ಅಂವಾ ಯಡಿಯೂರಪ್ಪ ಅವರಿಗೆ ಏನು ಉಪಕಾರ ಮಾಡ್ಯಾನಾ? ಅಧಿಕಾರ ಅನುಭವಿಸಿ ಯಡಿಯೂರಪ್ಪ ಅವರಿಗೆ ಕೈ ಕೊಟ್ಟರಲ್ಲ? ಯಾರು ಕಡೆಗಣಿಸಿಲ್ಲ. ಬಿಎಸ್ ವೈ ನಮಗೆ ವರಿಷ್ಠ ನಾಯಕರುʼʼ ಎಂದರು.
ಇದನ್ನೂ ಓದಿ : ಬ್ರಾಹ್ಮಣ ಸಿಎಂ ಹೇಳಿಕೆ ಪ್ರಶ್ನಿಸಿದ್ದ ಗೋಕರ್ಣ ಅರ್ಚಕರಿಗೇ ಕರೆ ಮಾಡಿ, ಕುಶಲೋಪರಿ ವಿಚಾರಿಸಿದ ಎಚ್.ಡಿ. ಕುಮಾರಸ್ವಾಮಿ