Site icon Vistara News

Brave hunt: 1.5 ಕಿ.ಮೀ. ಎಳೆದೊಯ್ದ ಪ್ರಕರಣ; ಆರೋಪಿ ಶಾಹಿಲ್‌ಗೆ ವೃದ್ಧನನ್ನು ಕೊಲ್ಲುವ ಉದ್ದೇಶ ಇತ್ತಾ?

ಬೆಂಗಳೂರು: ಇಲ್ಲಿನ ಮಾಗಡಿ ರಸ್ತೆಯ ಟೋಲ್‌ಗೇಟ್‌ನಿಂದ ಹೊಸಳ್ಳಿವರೆಗೆ ಸ್ಕೂಟರ್‌ನಲ್ಲಿ ಒಂದೂವರೆ ಕಿ.ಮೀ. ದರದರನೇ ಎಳೆದೊಯ್ದ ಪ್ರಕರಣಕ್ಕೆ (Brave hunt) ಸಂಬಂಧಿಸಿದಂತೆ ಆರೋಪಿ ಶಾಹಿಲ್‌ ಮಹತ್ವದ ಸಂಗತಿಯೊಂದನ್ನು ಬಾಯಿಬಿಟ್ಟಿದ್ದಾನೆ. ಅಪಘಾತದ ವೇಳೆ ನನಗೆ ಗಾಬರಿಯಾಯಿತು. ತಪ್ಪಿಸಿಕೊಳ್ಳಲು ಮುಂದಾದೆ, ಇದೇ ವೇಳೆ ಆ ವೃದ್ಧ ಮುತ್ತಪ್ಪ ನನ್ನ ಸ್ಕೂಟರ್‌ ಹಿಡಿಕೆ ಹಿಡಿದು ಜೋತು ಬಿದ್ದರು. ಆದರೆ ಅವರು ಸತ್ತರೆ ಸಾಯಲಿ ಎಂದು ಜೋರಾಗಿ ಓಡಿಸಿಕೊಂಡು ಹೋದೆ ಎಂದು ಹೇಳಿದ್ದಾನೆ.

ವೃದ್ಧನಿಂದ ತಪ್ಪಿಸಿಕೊಳ್ಳಲು ಶಾಹಿಲ್‌ ಕೊಲ್ಲುವ ಉದ್ದೇಶ ಇತ್ತು ಎಂಬ ಸಂಗತಿ ಈಗ ವಿಚಾರಣೆ ವೇಳೆ ತಿಳಿದು ಬಂದಿದೆ. ಜನವರಿ 17ರಂದು ಅಪಘಾತ ನಡೆದಾಗ ಭಯದಿಂದ ಈ ರೀತಿ ಮಾಡಿದ್ದಾಗಿ ಬಂಧಿತ ಶಾಹಿಲ್‌ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾನೆ.

ಶಾಹಿಲ್ ಯಾಸಿನ್ ಪೊಲೀಸರ ಮುಂದೆ ಹೇಳಿದ್ದು ಏನು?
ಬೆಂಗಳೂರಿನಲ್ಲಿ ಕಳೆದ ೮ ವರ್ಷಗಳಿಂದ ವಾಸವಾಗಿದ್ದು, ನನ್ನೊಂದಿಗೆ ತಾಯಿ ಶಬನಮ್ ಮತ್ತು ತಮ್ಮ ವಾಸವಾಗಿದ್ದಾರೆ. ತಂದೆ ಮೂಲತಃ ಗುಜರಾತ್‌ನವರಾಗಿದ್ದು, ನಾನು ವಾಸವಿ ಇಂಟರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಓದಿದ್ದೇನೆ. ಬಳಿಕ ಓದುವುದನ್ನು ಬಿಟ್ಟಿದ್ದೆ. ಇದಾದ ನಂತರ ಕಳೆದ ೭ ತಿಂಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿ ಇರುವ ಯುನೈಟೆಡ್ ಅಸೋಸಿಯೇಟ್ಸ್ ಎಂಬ ಹೆಸರಲ್ಲಿ ಇರುವ ಡೆಟಾಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಲಿದ್ದು, ಹಣದ ಕಲೆಕ್ಷನ್‌ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ.

ಜನವರಿ 17ರಂದು ಬೆಳಗ್ಗೆ ೯ ಗಂಟೆಗೆ ಎಂದಿನಂತೆ ನಮ್ಮ ಕಂಪನಿ ಮಾಲೀಕರು ನನಗೆ ಯಲಹಂಕದ ಕಡೆಗೆ ಹೋಗಿ ಆರ್ಡರ್ ಹಾಗೂ ಕಲೆಕ್ಷನ್ ಮಾಡಿಕೊಂಡು ಬರುವಂತೆ ಕೆಲಸಕ್ಕೆ ನೇಮಿಸಿದ್ದರು. ಅದರಂತೆ ನಾನು ನನ್ನ ಸುಜುಕಿ ಆಕ್ಸಿಸ್ ಸ್ಕೂಟರ್‌ನಲ್ಲಿ ಯಲಹಂಕದ ಕಡೆಗೆ ಹೋಗಿ ಆರ್ಡರ್ ಮತ್ತು ಹಣವನ್ನು ಕಲೆಕ್ಷನ್ ಮಾಡಿಕೊಂಡು ಹೊರಟಿದ್ದೆ. ಅಂದು ಮಧ್ಯಾಹ್ನ ಸುಮಾರು ೨ ಗಂಟೆ ಸಮಯದಲ್ಲಿ ನಾಯಂಡನಹಳ್ಳಿಯ ನಮ್ಮ ಮನೆಗೆ ಹೋಗುವ ಸಲುವಾಗಿ ವೆಸ್ಟ್ ಆಫ್‌ ಕಾರ್ಡ್ ರಸ್ತೆಯ ಮುಖಾಂತರ ಟೋಲ್‌ಗೇಟ್ ಅಂಡರ್‌ಪಾಸ್ ಬಳಿ ಬರುತ್ತಿದ್ದೆ.

ರಸ್ತೆ ಬದಿಯಲ್ಲಿ ಒಂದು ಬೊಲೆರೋ ವಾಹನ ನಿಂತಿದ್ದು ನಾನು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಸ್ಪೀಡಾಗಿ ಬರುತ್ತಿದ್ದರಿಂದ ಕಂಟ್ರೋಲ್ ಮಾಡಲು ಸಾಧ್ಯವಾಗದ ಕಾರಣ ಬೊಲೆರೋ ವಾಹನಕ್ಕೆ ಗುದ್ದಿ ಕೆಳಗಡೆ ಬಿದ್ದೆನು. ನಂತರ ಬೊಲೇರೋ ವಾಹನದ ಚಾಲಕರು ಅಲ್ಲೇ ಇದ್ದು ನನ್ನ ಬಳಿಗೆ ಬರುತ್ತಿದ್ದರು. ಅವರು ನನ್ನನ್ನು ಹಿಡಿದುಕೊಳ್ಳುತ್ತಾರೆ, ಅಷ್ಟರಲ್ಲಿ ಅವರಿಂದ ತಪ್ಪಿಸಿಕೊಂಡು ಹೋಗಬೇಕೆಂದು ತೀರ್ಮಾನಿಸಿ ನಾನು ಹೊರಡಲು ಯತ್ನಿಸಿದಾಗ ಬೊಲೇರೋ ಡ್ರೈವರ್ ನನ್ನ ಸ್ಕೂಟರ್‌ನ ಹಿಂಬದಿಯ ಸ್ಟ್ಯಾಂಡ್ ಅನ್ನು ಹಿಡಿದುಕೊಂಡರು.

ನಂತರ ನಾನು ನನ್ನ ಗಾಡಿಯನ್ನು ನಿಲ್ಲಿಸದೇ ಅಲ್ಲಿಂದ ಇನ್ನೂ ಸ್ಪೀಡಾಗಿ ಗಾಡಿ ಓಡಿಸಿಕೊಂಡು ಹೋಗುತ್ತಿದ್ದಾಗ, ಬೊಲೇರೋ ಡ್ರೈವರ್ ಗಾಡಿ ನಿಲ್ಲಿಸುವಂತೆ ಕೇಳಿಕೊಂಡರು. ನಾನು ಗಾಡಿಯನ್ನು ನಿಲ್ಲಿಸದೇ ಹಾಗೇ ಎಳೆದುಕೊಂಡು ಹೋಗಿ ಅವನನ್ನು ಸಾಯಿಸಬೇಕೆಂದು ತೀರ್ಮಾನಿಸಿಕೊಂಡು ಸುಮಾರು ೫೦೦ ರಿಂದ ೬೦೦ ಮೀಟರ್‌ವರೆಗೆ ಗಾಡಿಯಲ್ಲೇ ಎಳೆದುಕೊಂಡು ಹೋಗುತ್ತಿದ್ದೆ.

ಅಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ನನ್ನನ್ನು ಅಡ್ಡ ಹಾಕಿ ತಡೆದು ನಿಲ್ಲಿಸಿದರು. ಗಾಡಿ ಸಮೇತ ಹಿಡಿದುಕೊಂಡರು. ಆಗ ಅಲ್ಲಿಗೆ ಹೊಯ್ಸಳ ಪೊಲೀಸರು ಬಂದು ನನ್ನನ್ನು ಸ್ಕೂಟರ್ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ನಾನು ಈ ರೀತಿ ಮಾಡಿರುವುದು ತಪ್ಪಾಗಿದೆ ಎಂದು ತಿಳಿಸಿದ್ದಾನೆ. ಈ ಸಂಬಂಧ ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿಕೊಂಡು ಜೈಲಿಗೆ ಅಟ್ಟಿದ್ದಾರೆ.

ಇದನ್ನೂ ಓದಿ | Uttar Pradesh | ಪಿಎಂ ಮೋದಿ, ಸಿಎಂ ಯೋಗಿ ಮುಸ್ಲಿಮರ ನಿಜವಾದ ಹಿತೈಷಿಗಳು! ಸಚಿವ ಡ್ಯಾನಿಶ್‌ ಆಜಾದ್‌ ಅನ್ಸಾರಿ ಅಭಿಪ್ರಾಯ

Exit mobile version