ಬೆಂಗಳೂರು: ವಿದ್ಯಾರ್ಥಿಗಳು ಅದ್ಭುತ ಕಲ್ಪನೆಗಳನ್ನು ಇಟ್ಟುಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ಭಾರತ ರತ್ನ ಡಾ. ಸಿಎನ್‌ಆರ್ ರಾವ್ ಹೇಳಿದರು. ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಸಲಹೆಗಾರ ಪ್ರೊ ಎಂ ಆರ್ ದೊರೆಸ್ವಾಮಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಜಂಟಿಯಾಗಿ ಆಯೋಜಿಸಲಾದ ವಿಜ್ಞಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಕನಸುಗಳನ್ನು ಕಾಣುವ ಮೂಲಕ ಯಶಸ್ಸು ಸಾಧಿಸಬಹುದು. ಸಾಧಕರ ಬಗೆಗಿನ ಜ್ಞಾನ ಹಾಗೂ ಅರಿವಿನ ಮೂಲಕ ಕ್ರಿಯಾಶೀಲರಾಗಬೇಕು ಎಂದವರು ನುಡಿದರು.
ಕಂದಾಯ ಸಚಿವ ಆರ್. ಅಶೋಕ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ “ಜ್ಞಾನಾರ್ಜನೆಗೆ ಸರಕಾರಿ ಮತ್ತು ಖಾಸಗಿ ಶಾಲೆ ಎಂಬ ಭೇದ ಅಗತ್ಯವಿಲ್ಲ. ಜ್ಞಾನವೇ ಯಶಸ್ಸಿನ ಗುಟ್ಟು. ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಭಾರತ ಸಾಕಷ್ಟು ಕೊಡುಗೆ ಕೊಟ್ಟಿದೆ. ಅಂತೆಯೇ ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡಿ, ಭಾರತವನ್ನು ವಿಶ್ವ ಗುರು ಮಾಡಬೇಕು,” ಎಂದು ಹೇಳಿದರು. ಇದೇ ವೇಳೆ ಅವರು ವಿಜ್ಞಾನ ಮೇಳ ಆಯೋಜಿಸಿದ್ದ ಪ್ರೊ ಎಂ ಆರ್ ದೊರೆಸ್ವಾಮಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಎಸ್ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್ ಆರ್ ನಾಗೇಂದ್ರ ಮಾತನಾಡಿ “ಭೌತಿಕ ವಿಜ್ಞಾನಗಳ ಪರಿಚಯವೇ ವಿಜ್ಞಾನ ಪರಂಪರೆಗೆ ನಾಂದಿ. ನಿಯಮಗಳನ್ನು ಪರಿಚಯ ಮಾಡುವ ಪ್ರಯತ್ನವೇ ಈ ವಿಜ್ಞಾನ ಮೇಳ. ಈ ನಿಯಮಗಳ ಪರಿಚಯ ಮಾಡುವ ಪ್ರಯತ್ನವೇ ಈ ವಿಜ್ಞಾನ ಮೇಳ. ಇದೊಂದು ವಿಶೇಷ ಅನುಭವ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಪ್ರೊ. ಎಂ. ಆರ್. ದೊರೆಸ್ವಾಮಿ “ಕರ್ನಾಟಕ ಸರ್ಕಾರ ಬಡವರ ಕನ್ನಡ ಶಾಲೆ ಮತ್ತು ಶ್ರೀಮಂತರ ಶಾಲೆಗಳ ಅಂತರ ಅಳಿಸಲು ಸನ್ನದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಶಾಲಾ ದತ್ತು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು,” ಎಂದು ಕರೆ ಕೊಟ್ಟರು.
‘ವಿಜ್ಞಾನ ಮೇಳ’ ಕಾರ್ಯಕ್ರಮವನ್ನು ವಿಸ್ತಾರವಾಗಬೇಕು. ಕರ್ನಾಟಕದ ಎಲ್ಲ ೭೦ ವಿಶ್ವವಿದ್ಯಾಲಯಗಳೂ ತಮ್ಮ ವ್ಯಾಪ್ತಿಗೆ ಒಳಪಟ್ಟ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಇಂತಹ ಮೇಳಗಳನ್ನು ಆಯೋಜಿಸಬೇಕು ಎಂದರು.
ಇದನ್ನೂ ಓದಿ | ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿ ಎಂ.ಆರ್.ದೊರೆಸ್ವಾಮಿ ನೇಮಕ