Site icon Vistara News

Rishi Sunak : ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ರಾಯರ ಭಕ್ತ, ಪ್ರತಿ ಗುರುವಾರ ಉಪವಾಸ ಮಾಡ್ತಾರೆ

ಬೆಂಗಳೂರು: ಬ್ರಿಟನ್​ ಪ್ರಧಾನಿ ಹಾಗೂ ಇನ್ಫೋಸಿಸ್​​ ಸಂಸ್ಥೆಯ ರೂವಾರಿಗಳಾದ ನಾರಾಯಣ ಮೂರ್ತಿ, ಸುಧಾ ಮೂರ್ತಿ ದಂಪತಿಯ ಅಳಿ ರಿಷಿ ಸುನಕ್, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಭಕ್ತರು. ಪ್ರತಿ ಗುರುವಾರ ಅವರು ಉಪವಾಸ ಮಾಡಿ ರಾಯರ ಪೂಜೆ ಮಾಡುತ್ತಾರೆ. ಹೀಗೆಂದು ಸ್ವತಃ ಸುಧಾ ಮೂರ್ತಿ ಅವರೇ ಹೇಳಿದ್ದಾರೆ. ತಮ್ಮ ಅಳಿಯ ರಾಯರ ಪೂಜೆ ಮಾಡುವ ವಿಚಾರವನ್ನು ವಿವರಿಸುವ ವಿಡಿಯೊವೊಂದು ಫೇಸ್​ಬುಕ್​ನಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರು ಸುನಕ್ ಅವರ ಧಾರ್ಮಿಕ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.

ರಿಷಿ ಸುನಕ್​ ಅವರು ಪಂಜಾಬ್​ ಮೂಲದವರು. ಅಲ್ಲದೆ ಶತಮಾನಗಳ ಹಿಂದೆಯೇ ಅವರ ಪೂರ್ವಿಕರು ಬ್ರಿಟನ್​ ಸೇರಿಕೊಂಡಿದ್ದರು. ಆದರೆ, ರಿಷಿ ಸುನಕ್​ ನಮ್ಮ ದೇಶದ ಧಾರ್ಮಿಕ ಸಂಪರ್ಕವನ್ನು ಕಳೆದುಕೊಂಡಿಲ್ಲ. ಪ್ರತಿ ಗುರುವಾರ ಉಪವಾಸ ಮಾಡಿ ರಾತ್ರಿ ಮಾತ್ರ ಊಟ ಮಾಡುತ್ತಾರೆ ಎಂದು ಸುಧಾ ಮೂರ್ತಿ ಅವರು ತಮ್ಮ ಸುತ್ತ ನೆರೆದಿದ್ದವರಿಗೆ ವಿವರಿಸುವ ವಿಡಿಯೊ ಓಂ ಶ್ರೀ ರಾಘವೇಂದ್ರಾಯ ನಮಃ ಎಂಬ ಫೇಸ್​ಬುಕ್​ ಪೇಜ್​ನಲ್ಲಿದೆ.

ನನ್ನ ಪುತ್ರಿ ಅಕ್ಷತಾಳಿಂದಾಗಿ ಅವರು ರಾಯರ ಭಕ್ತಿಯನ್ನು ಆರಂಭಿಸಿದ್ದಾರೆ. ಪತ್ನಿಯಿಂದಾಗಿ ಅವರು ಬದಲಾಗಿದ್ದಾರೆ. ರಿಷಿ ಏನೇ ಕೆಲಸ ಆರಂಭಿಸುವುದಾದರೂ ಗುರುವಾರ ಅರಂಭಿಸುತ್ತಾರೆ. ಈ ಮೂಲಕವೂ ಅವರು ರಾಯರ ಮೇಲಿನ ಭಕ್ತಿ ಪ್ರದರ್ಶಿಸುತ್ತಾರೆ ಎಂದು ಸುಧಾ ಮೂರ್ತಿ ವಿವರಿಸಿದ್ದಾರೆ.

ಇದನ್ನೂ ಓದಿ : Infosys : ರಿಷಿ ಸುನಕ್‌ ಪತ್ನಿ ಅಕ್ಷತಾ ಮೂರ್ತಿಗೆ ಇನ್ಫೋಸಿಸ್‌ನಿಂದ 68.17 ಕೋಟಿ ರೂ. ಡಿವಿಡೆಂಡ್‌ ಆದಾಯ

ಮುಂದುವರಿದ ಅವರು ತಮ್ಮ ಪತಿ ನಾರಾಯಣ ಮೂರ್ತಿಯವರಿಗೆ ಇರುವ ರಾಯರ ಭಕ್ತಿಯನ್ನೂ ಹೇಳುತ್ತಾರೆ. ನಾರಾಯಣ ಮೂರ್ತಿ ಅವರು ತಪ್ಪದೇ ಮಂತ್ರಾಲಯಕ್ಕೆ ಹೋಗುತ್ತಾರೆ. ಅವರು ಮಧುಮೇಹಿ. 77 ವರ್ಷದ ಅವರು ಉಪವಾಸ ಇದ್ದು ರಾಯರ ಸನ್ನಿಧಿಗೆ ಹೋಗಿ ಬೃಂದಾವನಕ್ಕೆ 11 ಪ್ರದಕ್ಷಿಣೆ ಹಾಗೂ 88 ನಮಸ್ಕಾರ ಮಾಡಿ ಆಹಾರ ತೆಗೆದುಕೊಳ್ಳುತ್ತಾರೆ ಎಂಬುದಾಗಿಯೂ ಹೇಳುತ್ತಾರೆ.

Exit mobile version