ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಸಲಹಾ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ದೇವೇಗೌಡರು ಕಳೆದ ಕೆಲವು ಸಮಯದಿಂದ ಸಣ್ಣ ಪ್ರಮಾಣದ ಅನಾರೋಗ್ಯದಲ್ಲಿದ್ದಾರೆ. ಕಾಲಿನ ನೋವು ಸ್ವಲ್ಪ ಜಾಸ್ತಿಯಾಗಿದೆ. ಹೀಗಾಗಿ ಮನೆಯಿಂದ ಹೊರಗೆ ಓಡಾಡಲು ಕಷ್ಟವಾಗುತ್ತಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತನಾಡುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಿದೆ.
ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ದೇವೇಗೌಡರ ಆರೋಗ್ಯ ಬೇಗನೆ ಸುಧಾರಿಸಲಿ ಎಂದು ಆಶಿಸಿದ್ದರು. ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿದ್ದರು. ಇದಾದ ಬಳಿಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಪದ್ಮನಾಭ ನಗರದ ಮನೆಗೆ ಭೇಟಿ ನೀಡಿ ತಮ್ಮ ಗುರುಗಳ ಜತೆ ಮಾತನಾಡಿದರು.
ಮಂಗಳವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸರದಿ. ಯಡಿಯೂರಪ್ಪ ಅವರು ಬರುತ್ತಾರೆ ಎನ್ನುವುದು ಮೊದಲೇ ತಿಳಿದಿದ್ದ ದೇವೇಗೌಡರು ಮೊದಲೇ ಸಿದ್ಧರಾಗಿ ಕುಳಿತಿದ್ದರು. ಯಡಿಯೂರಪ್ಪ ಅವರು ದೇವೇಗೌಡರ ಬಳಿಗೆ ಹೋಗಿ ಕಾಲನ್ನು ಮುಟ್ಟಿ ನಮಸ್ಕರಿಸಿದರು. ದೇವೇಗೌಡರು ಅವರ ಕೈಹಿಡಿದರು. ಕೆಲ ಹೊತ್ತು ಅವರಿಬ್ಬರು ಆತ್ಮೀಯತೆಯಿಂದ ಹರಟಿದರು. ದೇವೇಗೌಡರು ತಮಗೆ ಮಂಡಿನೋವಿದೆ ಎಂದು ಹೇಳಿಕೊಂಡರು.
ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ʻʻದೇವೇಗೌಡರ ಜ್ಞಾಪಕ ಶಕ್ತಿ ದೊಡ್ಡದು. ಇಡೀ ರಾಜ್ಯದ ಉದ್ದಗಲಕ್ಕೂ ಸುತ್ತಿದ್ದಾರೆ. ಈಗಲೂ ರಾಜ್ಯಾದ್ಯಂತ ಸುತ್ತಬೇಕು ಅಂದರು.. ಅನೇಕ ಹಳೆಯ ಸಂಗತಿಗಳನ್ನು ಅವರು ಮರೆತಿಲ್ಲ. ನಾವು ಹಳೆಯ ಸಂಗತಿಗಳನ್ನು ಸ್ಮರಿಸಿಕೊಂಡೆವುʼʼ ಎಂದರು. ʻʻಅವರು ನಮಗೆಲ್ಲರಿಗೂ ಮಾರ್ಗದರ್ಶಕರು, ನಮ್ಮ ಧೀಮಂತ ನಾಯಕರು. ಇನ್ನೂ ಹತ್ತಾರು ವರ್ಷ ಅವರು ಆರೋಗ್ಯವಾಗಿರ್ತಾರೆ. ದೇವರ ಆಶೀರ್ವಾದದಿಂದ ಇನ್ನೂ ಹತ್ತಾರು ವರ್ಷ ಓಡಾಡುವಂತಾಗಲಿʼʼ ಎಂದು ಆಶಿಸಿದರು ಬಿಎಸ್‌ವೈ. ಯಡಿಯೂರಪ್ಪ ಅವರು ದೇವೇಗೌಡರ ಜತೆ ಕುಮಾರಸ್ವಾಮಿ ಅವರನ್ನೂ ಕೇಳಿದರು.
ವಿದ್ಯಾರ್ಥಿಭವನದಲ್ಲಿ ದೋಸೆ ಸವಿದ ಯಡಿಯೂರಪ್ಪ
ದೇವೇಗೌಡರನ್ನು ಭೇಟಿಯಾಗಿ ವಾಪಸ್ ಬರುವಾಗ ಮಾರ್ಗ ಮಧ್ಯದಲ್ಲಿ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ಬಿಎಸ್ ವೈ ಮತ್ತು ಇತರರು ವಿದ್ಯಾರ್ಥಿ ಭವನಕ್ಕೆ ಭೇಟಿ ದೋಸೆ ಸವಿದರು. ಈ ಸಂದರ್ಭದಲ್ಲಿ ಶಾಸಕ ಗರುಡಾಚಾರ್ , ಎಸ್.ಆರ್.ವಿಶ್ವನಾಥ್, ಎಂ.ಕೃಷ್ಣಪ್ಪ ಜತೆಗಿದ್ದರು.