Site icon Vistara News

Karnataka Budget 2023 : ಕುವೆಂಪು ಆದರ್ಶಗಳಿಗೆ ವಿರುದ್ಧವಾದ ಬಜೆಟ್: ಎನ್. ರವಿಕುಮಾರ್

MLC Ravikumar

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ಘನತೆಗೆ ವಿರುದ್ಧವಾದ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳಿಗೆ ವ್ಯತಿರಿಕ್ತವಾದ ಬಜೆಟ್ (Karnataka Budget 2023) ಮಂಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕೆ ಮಾಡಿದ್ದಾರೆ.

ಬಜೆಟ್ ಮಂಡನೆ ಎನ್ನುವುದು ರಾಜ್ಯದ ಅಭಿವೃದ್ಧಿ, ಮುನ್ಸೂಚನೆ ನೀಡುವ ದಾಖಲೆ. ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ನಾವೆಲ್ಲ ಚುನಾವಣೆ ಸಮಯದಲ್ಲಿ ಹಾಗೂ ಸದನದ ಹೊರತೆ ಆರೋಪ ಪ್ರತ್ಯಾರೋಪ ಮಾಡಿದರೂ ಬಜೆಟ್ ಮಂಡನೆ ಎನ್ನುವುದು ರಾಜಕೀಯದಿಂದ ಹೊರತಾದ ಪವಿತ್ರ ಕರ್ತವ್ಯ. ಸದನದಲ್ಲಿ ಬಜೆಟ್ ಮಂಡನೆಗೆ ಅವಕಾಶ ಸಿಗುವುದು ಪುಣ್ಯದ ಫಲ. ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ 14 ಬಾರಿ ಬಜೆಟ್ ಮಂಡನೆಗೆ ಅವಕಾಶ ಸಿಕ್ಕಿರುವುದು ಈ ರಾಜ್ಯ ಹಾಗೂ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣಕ್ಕೆ, ಒಕ್ಕೂಟ ವ್ಯವಸ್ಥೆಯ ಕಾರಣಕ್ಕೆ. ಆದರೆ ಈ ಬಾರಿ ಸಿದ್ದರಾಮಯ್ಯ ಅವರು ತಮ್ಮ ಕರ್ತವ್ಯದಲ್ಲಿ ವಿಮುಖರಾಗಿದ್ದಾರೆ. ಬಜೆಟ್​​ನ ಪ್ರತಿ ಅಂಶದಲ್ಲೂ ಬಿಜೆಪಿಯನ್ನು ಟೀಕಿಸಲು ಒಂದಷ್ಟು ಅಂಶವನ್ನು ಮೀಸಲಿಟ್ಟಿದ್ದಾರೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಪವಿತ್ರ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು “ಟೀಂ ಇಂಡಿಯಾ” ಪರಿಕಲ್ಪನೆಯಲ್ಲಿ ದೇಶದ ಆರ್ಥಿತೆಯನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡಲು ಹೊರಟಿದ್ದಾರೆ. ಆದರೆ ಸಿದ್ದರಾಮಯ್ಯ ಅವರು “ಬ್ರೇಕಿಂಗ್ ಇಂಡಿಯಾ” ಪರಿಕಲ್ಪನೆಯಲ್ಲಿ ಕರ್ನಾಟಕವನ್ನು ಅಭಿವೃದ್ಧಿಯಿಂದ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಆಡಳಿತವು ರಾಷ್ಟ್ರಪತಿಗಳ ಆಜ್ಞಾನುಸಾರ, ರಾಜ್ಯಪಾಲರ ಮೂಲಕ ನಡೆಯುತ್ತದೆ ಎನ್ನುವುದು ಸಾಂವಿಧಾನಿಕ ಸ್ವರೂಪ. ಅಂದರೆ ನಾವೆಲ್ಲರೂ ಒಂದು ದೇಶದ ಅಂಗಗಳು ಎನ್ನುವುದೇ ಒಕ್ಕೂಟ ವ್ಯವಸ್ಥೆಯ ರಚನೆ. ಆದರೆ ಬಜೆಟ್ನಂತಹ ಅಧಿಕೃತ ದಾಖಲೆಗಳಲ್ಲಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಮಾತುಗಳನ್ನೇ ಸಿದ್ದರಾಮಯ್ಯ ಆಡಿದ್ದಾರೆ. ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸಲು ಕರ್ನಾಟಕ ಸರ್ಕಾರ ಶ್ರಮಿಸಲಿದೆ ಎಂದಿರುವ ಸಿದ್ದರಾಮಯ್ಯ ಅವರು, ನಿಸ್ತೇಜಗೊಂಡಿರುವ ಕಾಂಗ್ರೆಸ್ ಪಕ್ಷವನ್ನು ತಾವು ಮೇಲೆತ್ತಬಹುದು ಎಂದು ಭ್ರಮಿಸಿದಂತಿದೆ. ಮನಬಂದಂತೆ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ ಎಂದು ಹೇಳಿದರು.

ಒಕ್ಕೂಟ ವ್ಯವಸ್ಥೆಯ ಅಣಕ

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಬಜೆಟ್​ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಆದರೆ ಅದೇ ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ಮಹಾವಾಕ್ಯಕ್ಕೆ ದ್ರೋಹ ಎಸಗಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ಹೊಂದಿದ್ದ ಎಲ್ಲ ಗೌರವ, ಮರ್ಯಾದೆಗಳನ್ನೂ ಗಾಳಿಗೆ ತೂರಿದ್ದಾರೆ. ಭಾರತದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯನ್ನೇ ಅಣಕಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೋಡೆತ್ತುಗಳಂತೆ, ಡಬಲ್ ಇಂಜಿನ್ ರೀತಿಯಲ್ಲಿ ನಡೆದರೆ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ಹೇಳುತ್ತಿದ್ದರೆ ಸಿದ್ದರಾಮಯ್ಯ ಅವರು ಭಾರತ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತೆ ನಡೆಯುತ್ತಿದ್ದಾರೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : Karnataka budget 2023 : ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳಿಗೆ ಪೆಟ್ರೋಲ್‌ ಬಂಕ್‌ ನಿರ್ವಹಣೆ ಹೊಣೆ!

ಆರ್ಥಿಕವಾಗಿಯೂ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ಬಿಜೆಪಿ ಸರ್ಕಾರ 77 ಸಾವಿರ ಕೋಟಿ ರೂ. ಸಾಲ ಮಾಡಿದ್ದರೆ ಈಗ 88 ಸಾವಿರ ಕೋಟಿ ರೂ.ಗೆ ಸಾಲವನ್ನು ಹೆಚ್ಚಿಸಿದ್ದಾರೆ. ಬಜೆಟ್ ಗಾತ್ರ 3.27 ಲಕ್ಷ ಕೋಟಿ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಯ ಯೋಜನೆಗಳನ್ನು ಘೋಷಿಸಿ ಉಳಿತಾಯ ಬಜೆಟ್ಟನ್ನು ಬಿಜೆಪಿ ಘೋಷಣೆ ಮಾಡಿತ್ತು. ಆದರೆ ಈಗ ಸಿದ್ದರಾಮಯ್ಯ ಅವರು 12,253 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ್ದಾರೆ. ಅಂದರೆ ಈ 12,253 ಕೋಟಿ ರೂ. ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂಬುದು ತಿಳಿಸಿಲ್ಲ. ಅಲ್ಲಿಗೆ ಈ ಬಜೆಟ್ನಲ್ಲಿ ಘೋಷಣೆ ಮಾಡಲಾದ ಎಲ್ಲವನ್ನೂ ಅನುμÁ್ಠನ ಮಾಡುವುದಿಲ್ಲ ಎಂದು ಈಗಲೇ ತಿಳಿಸಿದ್ದಾರೆ ಎಂದು ರವಿಕುಮಾರ್ ಹೇಳಿದ್ದಾರೆ.

Exit mobile version