ಬೆಂಗಳೂರು: ಮಕ್ಕಳನ್ನು ಶಾಲೆಗೆ ಬಿಡಲು ಬಂದ ಪೋಷಕರಿಗೆ ಶಾಕ್ ಕಾದಿತ್ತು. ಯಾಕೆಂದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಶಾಲಾ ಕಟ್ಟಡವೇ ಕುಸಿದು (Building collapse) ಬಿದ್ದಿತ್ತು. ರಾತ್ರೋರಾತ್ರಿ ಶಿವಾಜಿನಗರದಲ್ಲಿ ಬಿಬಿಎಂಪಿಗೆ ಸೇರಿದ ನರ್ಸರಿ ಶಾಲಾ ಕಟ್ಟಡವೊಂದು ಕುಸಿದು ಬಿದ್ದಿದೆ. ಸುಮಾರು 80 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಈ ನರ್ಸರಿ ಶಾಲೆಯಲ್ಲಿ 80ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು ಎನ್ನಲಾಗಿದೆ.
ಡೋಂಟ್ ಕೇರ್ ಮನಸ್ಥಿತಿ
ಶಾಲಾ ಕಟ್ಟಡ ಹಳೆಯದಾಗಿದೆ ಎಂದು ಹಲವು ಬಾರಿ ದೂರು ನೀಡಿದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿಲ್ಲ. ನಿನ್ನೆ ರಾತ್ರಿ ದಿಢೀರ್ ಕಟ್ಟಡ ಕುಸಿದಿದೆ. ಒಂದು ವೇಳೆ ಮಕ್ಕಳು ಇದ್ದಾಗ ಕಟ್ಟಡ ಕುಸಿದಿದ್ದರೆ ದುರಂತಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಹಾಗೂ ಮಕ್ಕಳ ಪೋಷಕರು ಕಿಡಿಕಾಡಿದ್ದಾರೆ.
ಸದ್ಯ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಆಗಮಿಸಿದ್ದು, ಜೆಸಿಬಿ ಮೂಲಕ ಕಟ್ಟಡ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ಕಟ್ಟಡದ ಮುಂಭಾಗ ನಿಲ್ಲಿಸಿದ್ದ ಕಾರು, ಆಟೋ, ಬೈಕ್‌ಗಳೆಲ್ಲವೂ ಜಖಂಗೊಂಡಿದೆ. ಅವಶೇಷದಡಿ ಇರುವ ಮಕ್ಕಳ ಆಟಿಕೆಗಳು, ಬೋಧನಾ ಸಾಮಾಗ್ರಿಗಳನ್ನು ಶಿಕ್ಷಕರು ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಕಾರ್ಪೋರೇಟರ್ ಸಯ್ಯದ್ ಸುಜಾವುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಈ ಶಾಲೆ ಕಟ್ಟಡಕ್ಕೆ ಸುಮಾರು 70 ರಿಂದ 80 ವರ್ಷ ಆಗಿದೆ. 2 ತಿಂಗಳ ಹಿಂದೆ ಶಾಸಕ ರಿಜ್ವಾನ್ ಅರ್ಷದ್ ಭೇಟಿ ನೀಡಿದ್ದರು. ಆಗ ಶಾಲೆಯನ್ನು ಸ್ಥಳಾಂತರ ಮಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಆದರೂ ಬಿಬಿಎಂಪಿಯ ಶಿಕ್ಷಣ ಇಲಾಖೆ ವಿಭಾಗ ಕ್ರಮ ಕೈಗೊಂಡಿಲ್ಲ. ಈ ಘಟನೆಗೆ ಪಾಲಿಕೆಯೇ ನೇರ ಹೊಣೆ ಎಂದು ಆರೋಪಿಸಿದರು.
ದೇವರ ದಯೆಯಿಂದ ಯಾವುದೇ ಅನಾಹುತ ಆಗಿಲ್ಲ. ಇಲ್ಲಿ ಶಿಶುವಿಹಾರದ ರೀತಿ ಚಿಕ್ಕ ಚಿಕ್ಕ ಮಕ್ಕಳು ಓದುತ್ತಿದ್ದರು. ಕಟ್ಟಡ ಕುಸಿಯುವ ವೇಳೆ ಮಕ್ಕಳು ಇದ್ದಿದ್ದರೆ ದೊಡ್ಡ ಅನಾಹುತವೇ ಆಗಿರುತ್ತಿತ್ತು. ಇದಕ್ಕೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು.
ಚಾಲಕನ ಅಳಲು
ಶಾಲಾ ಕಟ್ಟಡದ ಮುಂಭಾಗ ನಿಲ್ಲಿಸಿದ್ದ ಆಟೋ ಸಂಪೂರ್ಣ ಜಖಂ ಗೊಂಡಿದ್ದರಿಂದ ಚಾಲಕ ಅಳಲು ತೊಡಿಕೊಂಡರು. ಜಾಗ ಇದೆ ಎಂದು ಇಲ್ಲಿ ಆಟೋ ನಿಲ್ಲಿಸುತ್ತಿದ್ದೆ. ರಾತ್ರಿ 2 ಗಂಟೆಗೆ ಏಕಾಏಕಿ ಕಟ್ಟಡ ಕುಸಿದಿದೆ. ನಮ್ಮ ಕುಟುಂಬಕ್ಕೆ ಆಟೋನೇ ಆಧಾರವಾಗಿತ್ತು. ಈಗ ನಷ್ಟ ಯಾರು ಕಟ್ಟಿ ಕೊಡುತ್ತಾರೆ ಎಂದು ಚಾಲಕ ಅನೀಶ್ ಸಂಕಷ್ಟ ತೊಡಿಕೊಂಡರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.