Site icon Vistara News

Bull Taming Festival: ಶಾಂತಗೇರಿ ಗ್ರಾಮದಲ್ಲಿ ಸಡಗರದಿಂದ ನಡೆದ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ

Bull-taming festival soraba Shanthageri village

#image_title

ಸೊರಬ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಏರ್ಪಡಿಸಿದ್ದ ಜನಪದ ಕ್ರೀಡೆಯಾಗಿರುವ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ (Bull Taming Festival) ಸಂಭ್ರಮದಿಂದ ಬುಧವಾರ (ಫೆ.1) ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಹಬ್ಬಕ್ಕೆ ಮಹತ್ವವಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ಸಾವಿರಾರು ಪ್ರೇಕ್ಷಕರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನ್‌ರ ಕೈಗೆ ಸಿಲುಕದಂತೆ ಹೋರಿಗಳು ಓಡುವ ದೃಶ್ಯ ನೋಡುಗರ ಮೈನವಿರೇಳಿಸಿತು. ಹೋರಿ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಗೆಬಗೆಯ ಜೂಲ, ಬಲೂನ್, ರಿಬ್ಬನ್, ಒಣ ಕೊಬ್ಬರಿ ಕಟ್ಟಿ ಸಿಂಗರಿಸಿದ್ದರು. ತೇರಿನಂತೆ ಸಿಂಗಾರಗೊಂಡ ಹೋರಿಗಳು ಅಖಾಡದಲ್ಲಿ ಓಡಿ ಬರುತ್ತಿದ್ದಂತೆ ಪ್ರೇಕ್ಷಕರ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿ ಬಂದಿತ್ತು. ಪೈಲ್ವಾನರು ಹೋರಿಗಳನ್ನು ಹಿಡಿದು ಬಲ ಪ್ರದರ್ಶನ ಮಾಡಿದರು.

ಇದನ್ನೂ ಓದಿ | Samantha: ಡಬ್ಬೂ ರತ್ನಾನಿ ಫೋಟೊಶೂಟ್‌ನಲ್ಲಿ ಮಿಂಚಿದ ಸಮಂತಾ

ಕರೆಕ್ಯಾತನಹಳ್ಳಿ ಯಜಮಾನ, ಹರೂರು ಗೂಳಿ, ಉದ್ರಿ ಡಾನ್, ಮನ್ಮನೆಯ ಅಧೀರ, ಯಲವಳ್ಳಿಯ ಗೂಳಿ, ಕೊಲೆಗಾರ, ತಾಳಗುಂದ ಅರ್ಜುನ, ಕೊಡಕಣಿ ಕದಂಬ, ಕೊಡಕಣಿ ರಾಯನ್, ಶಾಂತಗೇರಿ ಡೇಜರ್ ಮುತ್ತು, ಬನವಾಸಿಯ ಕದಂಬ, ಶಿಕಾರಿಪುರ ಹೋಯ್ಸಳ, ಕಡೆನಂದಿಹಳ್ಳಿ ನಾಯಕರ ಹುಲಿ, ತಾವರೆಕೊಪ್ಪದ ಪೈಲ್ವಾನ, ಶಿಗ್ಗಾದ ಮೆಜೆಸ್ಟಿಕ್ ಹುಲಿ, ಅಂಡಿಗೆ ಆರ್‍ಎಂಡಿ ಕಿಂಗ್, ಶಿಕಾರಿಪುರ ವಾರಸ್ದಾರ, ಗದ್ದೆಮನೆ ಹುಲಿ, ಚಂದ್ರಗುತ್ತಿಯ ಚಂದ್ರಗುತ್ಯಮ್ಮ ಮತ್ತು ಬೆಳ್ಳಿ ಕುದುರೆ ಸೇರಿದಂತೆ ಜನಪದ ಸಂಸ್ಕೃತಿಯ ಪ್ರತೀಕವಾದ ಹಬ್ಬದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ ಓಡಿದವು.

ಸಮಿತಿಯ ವತಿಯಿಂದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿತ್ತು. ಅಖಾಡದ ಎರಡೂ ಬದಿಯಲ್ಲಿ ಬೇಲಿಯನ್ನು ನಿರ್ಮಿಸಲಾಗಿತ್ತು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಲಾಯಿತು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಮತ್ತು ಬಲ ಪ್ರದರ್ಶನ ಮಾಡಿದ ಪೈಲ್ವಾನರನ್ನು ಗುರುತಿಸಲಾಯಿತು.

ಇದನ್ನೂ ಓದಿ | CD Case: ದೆಹಲಿಯತ್ತ ರಮೇಶ್‌ ಜಾರಕಿಹೊಳಿ; ಸಿಡಿ ಷಡ್ಯಂತ್ರದ ಪ್ರಕರಣ ಸಿಬಿಐಗೆ ವಹಿಸುವಂತೆ ಹೈಕಮಾಂಡ್‌ಗೆ ಮೊರೆ?

Exit mobile version