ಧಾರವಾಡ: ಸಾರಿಗೆ ಬಸ್‌ನಲ್ಲಿ ಚಾಲಕ ಛತ್ರಿ ಹಿಡಿದು ಚಾಲನೆ ಮಾಡಿದ್ದ ವಿಡಿಯೊ ವೈರಲ್ (Driving Bus With Umbrella) ಆದ ಹಿನ್ನೆಲೆಯಲ್ಲಿ ಕಳಪೆ ನಿರ್ವಹಣೆ ಬಗ್ಗೆ ಸಾರಿಗೆ ನಿಗಮದ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದರು. ಆದರೆ, ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆ ಮಾಡಿದಾಗ, ವಿಡಿಯೋ ಅಸಲಿಯತ್ತು ಹೊರಬಿದ್ದಿದೆ. ಮಳೆಯಿಂದ ಬಸ್ ಸೋರಿಲ್ಲ, ಮೋಜಿಗಾಗಿ ಡ್ರೈವರ್ ಕೊಡೆ ಹಿಡಿದು ಚಾಲನೆ ಮಾಡಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಡ್ರೈವರ್, ಕಂಡಕ್ಟರ್ ಇಬ್ಬರನ್ನೂ ಅಮಾನತು ಮಾಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸೋರುತಿಹುದು ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್ ಎಂದು ವಿಡಿಯೊ ವೈರಲ್ ಆಗಿತ್ತು. ಇದರಿಂದ ಸಾರಿಗೆ ನಿಗಮದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಸಿಬ್ಬಂದಿಯನ್ನು ಅಧಿಕಾರಿಗಳು ವಿಚಾರಣೆ ಮಾಡಿದಾಗ ಅಸಲೀ ವಿಷಯ ಬೆಳಕಿಗೆ ಬಂದಿದೆ. ಮಳೆಯಿಂದ ಬಸ್ ಸೋರಿಲ್ಲ, ಮೋಜಿಗಾಗಿ ಡ್ರೈವರ್ ಕೊಡೆ ಹಿಡಿದು ಚಾಲನೆ ಮಾಡಿದ್ದ ಎನ್ನುವುದು ತಿಳಿದುಬಂದಿದೆ.
ಕೊಡೆ ಹಿಡಿದು ಡ್ರೈವರ್ ಚಾಲನೆ ಮಾಡುತ್ತಿದ್ದರೆ ನಿರ್ವಾಹಕಿ ವಿಡಿಯೊ ಸೆರೆಹಿಡಿದಿದ್ದಾಳೆ. ಪ್ರಕರಣ ಸಂಬಂಧ ಚಾಲಕ ಹಣಮಂತ್ ಕಿಲ್ಲೇದಾರ್ ಹಾಗೂ ನಿರ್ವಾಹಕಿ ಎಚ್. ಅನಿತಾ ಅವರನ್ನು ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Karnataka Weather : ಕೈಯಲ್ಲಿ ಛತ್ರಿ ಹಿಡಿದು ಬಸ್ ಡ್ರೈವಿಂಗ್; ಮಳೆಗೆ ಕುಸಿದು ಬಿದ್ದ ಮಾಳಿಗೆ ಮನೆ
ಧಾರವಾಡದಲ್ಲಿ ಭಾರಿ ಮಳೆಗೆ ಸಾರಿಗೆ ಬಸ್‌ನಲ್ಲಿ ನೀರು ಸೋರುತ್ತಿದ್ದ ಕಾರಣಕ್ಕೆ, ಚಾಲಕರೊಬ್ಬರು ಒಂದು ಕೈಯಲ್ಲಿ ಛತ್ರಿ ಹಿಡಿದು ಮತ್ತೊಂದು ಕೈಯಲ್ಲಿ ಬಸ್ ಡ್ರೈವಿಂಗ್ ಮಾಡಿದ್ದಾರೆ ಎಂಬ ವಿಡಿತೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಗೆ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್‌ನಲ್ಲಿ ಭಾರಿ ಮಳೆಗೆ ಎಲ್ಲ ಕಡೆಯು ನೀರು ಸೋರಿದೆ. ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ಚಾಲಕ ಛತ್ರಿ ಹಿಡಿದುಕೊಂಡು ಬಸ್ ಅನ್ನು ಚಾಲನೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಕರ್ತವ್ಯದ ವೇಳೆ ರೀಲ್ಸ್ ಮಾಡಲು ಬಸ್ ಬಳಕೆ ಮಾಡಿಕೊಂಡಿದ್ದರಿಂದ ಚಾಲಕ, ನಿರ್ವಾಹಕಿ ವಿರುದ್ಧ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದಾರೆ.