ಬೆಂಗಳೂರು: ಆರು ವರ್ಷ ಕಳೆದರೂ ವೇತನ ಹೆಚ್ಚಳ ಮಾಡದ ರಾಜ್ಯ ಸರ್ಕಾರದ ವಿರುದ್ಧ ನಾಲ್ಕು ನಿಗಮದ ಸಾರಿಗೆ ನೌಕರರು (Bus Service) ಬೀದಿಗಿಳಿಯಲಿದ್ದಾರೆ. ಸರ್ಕಾರದ ಧೋರಣೆ ಖಂಡಿಸಿ ಜ.24ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದು, ಇದರಿಂದಾಗಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಧರಣಿ ಹಾಗೂ ಬಿಎಂಟಿಸಿ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಸಾವಿರಾರು ನೌಕರರು ಧರಣಿಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ.
ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021 ರ ಏಪ್ರಿಲ್‌ನಲ್ಲಿ 15 ದಿನಗಳ ಕಾಲ ನೌಕರರು ಮುಷ್ಕರ ನಡೆಸಿದ್ದರು. ಈಗ ಮತ್ತೆ ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ ಮಾಡಲಾಗಿದೆ.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಿಯಮಬದ್ಧವಾಗಿ 2020 ಮಾರ್ಚ್‌ನಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತು. 2016ರಲ್ಲಿ ಶೇ. 12.5ರಷ್ಟು ವೇತನ ಪರಿಷ್ಕರಣೆ ಆಗಿತ್ತು. ಬಳಿಕ ಕೋವಿಡ್ ನೆಪವೊಡ್ಡಿ ವೇತನ ಪರಿಷ್ಕರಣೆಯನ್ನು ಮುಂದೂಡಲಾಗಿತ್ತು. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಿ ಒಂದೂವರೆ ವರ್ಷ ಕಳೆದರೂ ಸರ್ಕಾರ ಬೇಡಿಕೆ ಈಡೇರಿಸಲು ಮನಸ್ಸು ಮಾಡಿಲ್ಲ. ಹೀಗಾಗಿ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಸಾರಿಗೆ ನೌಕರರ ಸಂಘಟನೆಯವರು ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕರ್ಸ್ ಫೆಡರೇಶನ್, ಕರ್ನಾಟಕ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆಎಸ್‌ಆರ್‌ಟಿಸಿ ಎಸ್ಎಸ್‌ಸಿಎಸ್‌ಟಿ ಎಂಪ್ಲಾಯಿಸ್ ಯೂನಿಯನ್, ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಸೇರಿ ೬ಕ್ಕೂ ಹೆಚ್ಚು ಸಂಘಟನೆಗಳು ಧರಣಿಗೆ ಬೆಂಬಲವನ್ನು ನೀಡಿವೆ.