ಹಾವೇರಿ (ಬ್ಯಾಡಗಿ): ಬ್ಯಾಡಗಿ ತಾಲೂಕಿನಲ್ಲಿ (Byadgi News) ಮೆಣಸಿನಕಾಯಿ ಜತೆಗೆ ತರಕಾರಿ, ಜೋಳ, ಹತ್ತಿಯನ್ನೂ ಹೆಚ್ಚಾಗಿ ಬೆಳೆಯುತ್ತಾರೆ. ಇವುಗಳಿಗೆ ಸಂಸ್ಕರಣಾ ಘಟಕ ನಿರ್ಮಿಸಿ ಅದರ ಮೌಲ್ಯವೃದ್ಧಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶ್ರೀ ಜಗದ್ಗುರು ಜಯದೇವ ಮುರುಘಾರಾಜೇಂದ್ರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಆಣೂರು, ಬುಡಪನಹಳ್ಳಿ ಹಾಗೂ ಆಸುಂಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ, ಆಣೂರು ಮತ್ತು ಕಬ್ಬೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ, ಕಾಗಿನೆಲೆಯ ಕನಕ ಮ್ಯೂಸಿಯಂ ಹಾಗೂ ನಿಸರ್ಗ ಚಿಕಿತ್ಸಾ ಕೇಂದ್ರದ ಉದ್ಘಾಟನೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಸಂಕೀರ್ಣ, ಕೃಷಿ ವಸ್ತುಸಂಗ್ರಾಹಲಯ, ಇ-ಸಂಪನ್ಮೂಲ ಮತ್ತು ಮಾಹಿತಿ ಕೇಂದ್ರ ಕಟ್ಟಡ ಶಂಕಸ್ಥಾಪನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾವೇರಿಯಲ್ಲಿ ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಯಾಗುತ್ತಿದೆ. ಶಾಶ್ವತವಾಗಿರುವ ಕೆಲಸಗಳಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ರೈತಶಕ್ತಿ ಯೋಜನೆಯಡಿ ಸುಮಾರು 392.51 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಖಾತೆಗಳಿಗೆ ವರ್ಗಾಯಿಸಲಾಗಿದೆ. 11 ಲಕ್ಷ ವಿದ್ಯಾರ್ಥಿಗಳಿಗೆ 460 ಕೋಟಿ ರೂ.ಗಳನ್ನು ಈಗಾಗಲೇ ರೈತ ವಿದ್ಯಾನಿಧಿಯಡಿ ನೀಡಲಾಗಿದೆ. 6 ಲಕ್ಷ ರೈತ ಕೂಲಿಕಾರ್ಮಿಕರನ್ನು ಗುರುತಿಸಲಾಗಿದ್ದು, ಈ ಪೈಕಿ 2 ಲಕ್ಷ ಮಕ್ಕಳು ವಿವಿಧ ಹಂತದ ವಿಧ್ಯಾಭ್ಯಾಸದಲ್ಲಿ ತೊಡಗಿದ್ದಾರೆ. 47,747 ಮಕ್ಕಳಿಗೆ ವಿದ್ಯಾನಿಧಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ರೈತರಿಗೆ ಶಕ್ತಿ ತುಂಬಿದರೆ ಅನ್ನ ನೀಡುತ್ತಾನೆ. ಆಹಾರಭದ್ರತೆ ಇರುವ ದೇಶ ಸ್ವಾಭಿಮಾನಿ, ಸ್ವಾವಲಂಬಿ ದೇಶವಾಗುತ್ತದೆ. ಕೃಷಿಗೆ ಉತ್ತೇಜನ ನೀಡುವ ಕೇಂದ್ರ ಬಜೆಟ್ ಇಂದು ಮಂಡಿಸಲಾಗಿದೆ. ಸುಮಾರು ಒಂದೂವರೆ ಲಕ್ಷ ಕೋಟಿ ರೂ.ಗಳನ್ನು ಕೃಷಿವಲಯಕ್ಕೆ ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿದ್ದಾರೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ಬರಗಾಲಪೀಡಿತರಾದವರಿಗೆ ಕೇಂದ್ರ ಸರ್ಕಾರ ದೊಡ್ಡ ಸಹಾಯವನ್ನು ಮಾಡಿದೆ. ಸಮಸ್ತ ಕನ್ನಡಿಗರ ವಿಶೇಷವಾಗಿ ಮಧ್ಯ ಕರ್ನಾಟಕದ ಜನರ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬೆಳೆಗಳ ಸಂಸ್ಕರಣಾ ಘಟಕಕ್ಕೆ ಸಹಾಯಧನ
ಸುಮಾರು 750 ಕೋಟಿ ರೂ.ಗಳ ವಿಮೆ ಹೆಚ್ಚುವರಿ ಕಂತನ್ನು ರೈತರ ಪರವಾಗಿ ರಾಜ್ಯ ಸರ್ಕಾರ ಕಟ್ಟಿದೆ. ಈ ಪ್ರಸ್ತಾವನೆಗೆ ಮಂಜೂರಾತಿ ಕೊಟ್ಟು ಇಲ್ಲಿಗೆ ಬಂದಿದ್ದೇನೆ. ಇಂದು ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ 15000 ಕೋಟಿ ರೂ.ಗಳಷ್ಟು ಹಣ ರೈತರಿಗೆ ಒದಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ರೈತಾಪಿ ವರ್ಗಕ್ಕೆ ಸಹಾಯ ಮಾಡಲಾಗುವುದು. ರೈತ ಅಭಿವೃದ್ಧಿಯಾದಾಗ ಸಾರ್ಥಕತೆ ಕಾಣಬಹುದು. ಬ್ಯಾಡಗಿ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಕೆರೆ ನಿರ್ಮಾಣ ಸೇರಿ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಗೆ ಮಂಜೂರಾತಿ ನೀಡಲಾಗಿದೆ. ಮೋಟೆಬೆನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಬೇಕು ಎಂಬ ಬಹಳ ದಿನಗಳ ಬೇಡಿಕೆಗೆ ಸ್ಪಂದಿಸಿ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು. ಈ ಭಾಗದ ಬೆಳೆಗಳ ಸಂಸ್ಕರಣಾ ಘಟಕಕ್ಕಾಗಿ ವಿಶೇಷ ಸಹಾಯಧನ ನೀಡಲು ಉತ್ತೇಜನ ನೀಡಲು ಸಿದ್ಧವಿದ್ದೇವೆ ಎಂದರು.
ಅತಿ ಶೀಘ್ರದಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆ
ರಾಜ್ಯದಲ್ಲಿ 12 ಶೈತ್ಯಾಗಾರಗಳನ್ನು ಸ್ಥಾಪಿಸಲಾಗಿದ್ದು, ಜನರೇಟರ್‌ಗಳಿಗಾಗಿ ಹೆಚ್ಚುವರಿ ಅನುದಾನವನ್ನು ಕೋರಲಾಗಿದೆ. ಅದಕ್ಕೂ ಮಂಜೂರಾತಿ ನೀಡಲಾಗುವುದು. ಬ್ಯಾಡಗಿ ನಗರ ಬೆಳೆಯಬೇಕು. ಬಸವೇಶ್ವರನಗರ ಹಾಗೂ ಮುಖ್ಯ ರಸ್ತೆಗೆ ಕೆಲಸವನ್ನು ಮಾಡಲಾಗುವುದು ಎಂದು ಭಾರವಸೆ ನೀಡಿದರು. ಅಭಿವೃದ್ಧಿಯ ಚಕ್ರ ನಿರಂತರವಾಗಿ ನಡೆಯಬೇಕು. ಹಾವೇರಿ ಜಿಲ್ಲೆಯ ವೈದ್ಯಕೀಯ ಕಾಲೇಜನ್ನು ಅತಿ ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ನೀರಾವರಿ ಯೋಜನೆ, ಹಾವೇರಿ ಅಭಿವೃದ್ಧಿ, ಮೆಗಾ ಡೈರಿ, ಮೆಗಾ ಎಪಿಎಂಸಿ , ಜವಳಿ ಪಾರ್ಕ್ ಮಾಡಿದ್ದು ನಮ್ಮ ಸರ್ಕಾರ. ಅಭಿವೃದ್ಧಿಯ ಬಗ್ಗೆ ನೈತಿಕತೆಯಿಂದ ನಾವು ಮಾತ್ರ ಮಾತನಾಡಲು ಸಾಧ್ಯ ಎಂದರು.
ಇದನ್ನೂ ಓದಿ | Mahatma Gandhi : ನಿಜವಾದ ಭಾರತವನ್ನು ಪ್ರತಿನಿಧಿಸಿದ ಏಕೈಕ ಆತ್ಮ ಗಾಂಧೀಜಿ: ಸಿಎಂ ಬೊಮ್ಮಾಯಿ
ಬ್ಯಾಡಗಿಯಲ್ಲಿ 438 ಕೋಟಿ ರೂ. ನೀರಾವರಿ ಯೋಜನೆಗಳು
ನಾನು ಪ್ರತಿಪಕ್ಷದ ಶಾಸಕ ಆಗಿದ್ದಾಗ ರೈತ ಸಂಘದವರು ಮನವಿ ಕೊಟ್ಡು ಬ್ಯಾಡಗಿ ತಾಲೂಕಿನಲ್ಲಿ ನೀರಾವರಿ ಮಾಡುವಂತೆ ಮನವಿ ಮಾಡಿದ್ದರು. ಆಗ ಆಡಳಿತ ಪಕ್ಷದ ಸಚಿವರು ಒಂದೇ ತಿಂಗಳಲ್ಲಿ ಮಾಡುವ ಭರವಸೆ ನೀಡಿ ಹೋದರು. ಒಂದು ತಿಂಗಳಲ್ಲಿ ಅಧಿಕಾರದಿಂದಲೇ ಹೋದರು.ನಮ್ಮ ಸರ್ಕಾರ ಬಂದ ಮೇಲೆ ಯಡಿಯೂರಪ್ಪ ಅವರು ಸಿಎಂ ಆಗಿ ನಾನು ಗೃಹ ಸಚಿವನಾಗಿ ಅವರಿಗೆ ಈ ಯೋಜನೆಗಳಿಗೆ ಒಪ್ಪಿಗೆ ಪಡೆದು, ಅವರಿಂದಲೇ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಬ್ಯಾಡಗಿ ತಾಲ್ಲೂಕಿನಲ್ಲಿ 438 ಕೋಟಿ ರೂ. ನೀರಾವರಿ ಯೋಜನೆಗಳು ಉದ್ಘಾಟನೆಯಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಜಲಜೀವನ್ ಮಿಷನ್ ಅಡಿ 51 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ 150 ಕೋಟಿ ರೂ.ಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಬ್ಯಾಡಗಿಯಲ್ಲಿ ಆರಂಭವಾಗಿರುವ ಈ ಕಾಮಗಾರಿ ಮುಂದಿನ 12 ತಿಂಗಳಲ್ಲಿ ಮುಗಿಸುವ ಸೂಚನೆ ನೀಡಿರುವುದಾಗಿ ತಿಳಿಸಿದರು.
ಹಾವೇರಿಗೆ 1614 ಕೋಟಿ ರೂ. ಯೋಜನೆ
ಹಿಂದಿನ ಮುಖ್ಯಮಂತ್ರಿಗಳು ಬೊಮ್ಮಾಯಿಯವರು ಹಾವೇರಿಗೆ ಏನೂ ಕೊಟ್ಡಿಲ್ಲ ಅಂತ ಹೇಳಿದ್ದಾರೆ. ರಾಜಕೀಯವಾಗಿ ಉತ್ತರ ನೀಡಲು ನನಗೂ ಬರುತ್ತದೆ. ಅವರ ಅವಧಿಯಲ್ಲಿ ಇಡೀ ಹಾವೇರಿ ಜಿಲ್ಲೆಗೆ 271 ಕೋಟಿ ರೂ. ನೀರಾವರಿಗೆ ಅನುಮೋದನೆ ನೀಡಿದ್ದು, ಅದರಲ್ಲಿ 200 ಕೋಟಿ ಹಣ ಬರಲೇ ಇಲ್ಲ. ನಮ್ಮ ಸರ್ಕಾರ ಬಂದ ನಂತರ 1614 ಕೋಟಿ ರೂ. ನೀರಾವರಿ ಯೋಜನೆಗಳಿಗೆ ನೀಡಲಾಗಿದೆ. ಹಾವೇರಿ ಜಿಲ್ಲೆಯ ಪ್ರದೇಶದ ಮಣ್ಣು ಫಲವತ್ತಾಗಿದೆ. ಇದಕ್ಕೆ ನೀರಾವರಿ ಮಾಡಿದರೆ ಉತ್ತಮ ಬೆಳೆ ಬರುತ್ತದೆ. ತುಂಗಾ ಮೇಲ್ದಂಡೆ ಯೋಜನೆ 1994 ರಲ್ಲಿಯೇ ಆರಂಭವಾಗಿತ್ತು. ಆಗಿನ ನೀರಾವರಿ ಸಚಿವರು ಎಚ್ ಕೆ ಪಾಟೀಲರು ಈ ಯೋಜನೆ ಮುಗಿಸಿದ ನಂತರವೇ ಹಾವೇರಿ ದಾಟುತ್ತೇನೆ ಅಂದಿದ್ದರು. ಆದರೆ 2008 ರ ವರೆಗೂ ಯೋಜನೆ ಆರಂಭವಾಗಲೇ ಇಲ್ಲ. ನಾನು ನೀರಾವರಿ ಸಚಿವನಾಗಿ ಅಧಿಕಾರಿಗಳ ಸಭೆ ಕರೆದಾಗ ಈ ಯೋಜನೆ ಪೂರ್ಣಗೊಳಿಸಲು 2 ವರ್ಷ ಬೇಕಾಗಬಹುದು ಎಂದು ತಿಳಿಸಿದರು.