ಚಾಮರಾಜನಗರ: ಎರಡು ಹಸುಗಳನ್ನು ಕೊಂದು ಇಬ್ಬರ ಮೇಲೆ ದಾಳಿ ಮಾಡಿದ್ದ ವ್ಯಾಘ್ರನನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೂಂಬಿಂಗ್ ದಿಗ್ಗಜ ಆನೆ ಅಭಿಮನ್ಯು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಸುಖಾಂತ್ಯ ಕಂಡಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದ ಸಮೀಪದ ಜಮೀನಿನಲ್ಲಿ ಶನಿವಾರ ಹುಲಿಯೊಂದು ದಾಳಿ ಮಾಡಿ ಎರಡು ಹಸುಗಳನ್ನು ಕೊಂದಿದ್ದಲ್ಲದೆ, ಇಬ್ಬರ ಮೇಲೆ ಎರಗಿತ್ತು. ಬಳಿಕ ಹುಲಿ ಪಕ್ಕದಲ್ಲಿದ್ದ ಬಾಳೆ ತೋಟದಲ್ಲಿ ಅಡಗಿತ್ತು. ಭಾನುವಾರ ಬೆಳಗ್ಗೆ ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತವಾಗಿರುವ ಆನೆ ಅಭಿಮನ್ಯು ಜತೆ ಕಾರ್ಯಾಚರಣೆ ಮೂಲಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಕೆಲಸ ಮಾಡುತ್ತಿದ್ದಾಗ ದಾಳಿ
ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗವಿಯಪ್ಪ ಎಂಬಾತನ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ವೇಳೆ ಹುಲಿಯ ಮೇಲೆ ಮಚ್ಚು ಬೀಸಿ ಗವಿಯಪ್ಪ ಪಾರಾಗಿದ್ದರು. ವಿಷಯ ತಿಳಿದು ಅವರಲ್ಲಿಗೆ ಬಂದ ರಾಜಶೇಖರ್ ಎಂಬಾತನ ಮೇಲೂ ಹುಲಿ ದಾಳಿ ನಡೆಸಿ ಗಾಯಗೊಳಿಸಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯು ಹುಲಿ ಬಾಳೆತೋಟದಿಂದ ಹೊರಹೋಗದಂತೆ ರಾತ್ರಿಯಿಡಿ ಎಚ್ಚರ ವಹಿಸಿದ್ದರು. ಭಾನುವಾರ ಬೆಳಗ್ಗೆ ಮಳೆ ಅಡ್ಡಿಯಾದರೂ ಅಭಿಮನ್ಯು ಆನೆ ಬಂದ ನಂತರ ಕಾರ್ಯಾಚರಣೆ ನಡೆಸಿ ಮೂರು ಅರಿವಳಿಕೆ ಮದ್ದನ್ನು ನೀಡಿ ಹುಲಿಯನ್ನು ಸೆರೆಹಿಡಿಯಲಾಯಿತು.
ಹುಲಿ ದಾಳಿಯಿಂದ ಇಬ್ಬರು ಗಾಯಗೊಂಡಿದ್ದರಿಂದ ಗೋಪಾಲಪುರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಈಗ ಹುಲಿಯನ್ನು ಸೆರೆ ಹಿಡಿದಿರುವ ಕಾರಣ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಹುಲಿ ಕಾಣಿಸಿಕೊಂಡಿದ್ದ ಬಗ್ಗೆ ಶನಿವಾರವೇ ಎಲ್ಲರಿಗೂ ತಿಳಿದಿತ್ತು. ಆಗಲೇ ಇದನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಬಿಡಬಹುದಿತ್ತು. ಇನ್ನು ಮುಂದಾದರೂ ಸಹ ಇಂತಹ ನಿರ್ಲಕ್ಷ್ಯ ಆಗದಿರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | ಬೆಂಗಳೂರಿನಿಂದ ಚಾಮರಾಜನಗರಕ್ಕೆ ಹೊರಟಿತು ʻಬೈರಾಗಿʼ ಯಾತ್ರೆ, ಅಭಿಮಾನಿಗಳ ಸಂಭ್ರಮದಲ್ಲಿ ಮುಳುಗೆದ್ದ ಚಿತ್ರತಂಡ