ವಿಜಯಪುರ/ಆನೇಕಲ್: ಎಲೆಕ್ಟ್ರಿಕಲ್ ಕಾರು, ಬೈಕುಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಸುದ್ದಿಗಳ ಮಧ್ಯೆಯೇ, ಪೆಟ್ರೋಲ್ ಕಾರುಗಳು ಸಹ ಬೆಂಕಿಗಾಹುತಿಯಾಗುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಭಾನುವಾರ (ಡಿ. ೧೮) ಒಂದೇ ದಿನ ರಾಜ್ಯದ ಮೂರು ಕಡೆ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿರುವ ಪ್ರಕರಣ ವರದಿಯಾಗಿದೆ.
ವಿಜಯಪುರದ ಇಟ್ಟಂಗಿಹಾಳ ಕ್ರಾಸ್ ಬಳಿ ಐವರು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ (Car Fire) ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಕಾರಿನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡ ಕೂಡಲೇ ಕಾರಿನಲ್ಲಿದ್ದವರು ಹೊರಬಂದು ಅಪಾಯದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರದ ಎಂ.ಎಚ್-10 ರಿಜಿಸ್ಟ್ರೇಷನ್ ಹೊಂದಿರುವ ಆಲ್ಟೋ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಅತ್ತಿಬೆಲೆ ಫ್ಲೈ ಓವರ್ ಮೇಲೆ ಹೊತ್ತಿ ಉರಿದ ಕಾರು
ಬೆಂಗಳೂರು- ಹೊಸೂರು ಹೆದ್ದಾರಿಯ ಅತ್ತಿಬೆಲೆ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಇಂಜಿನ್‌ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಚಾಲಕ ರಸ್ತೆ ಬದಿಗೆ ಕಾರು ನಿಲ್ಲಿಸಿದ್ದಾರೆ.
ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಯಾವುದೇ ಅಪಾಯವಿಲ್ಲದೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದು, ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯನಗರದಲ್ಲೂ ಕಾರಿಗೆ ಬೆಂಕಿ
ವಿಜಯನಗರದ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದ (car fire) ಘಟನೆ ಭಾನುವಾರ (ಡಿ.೧೮) ನಡೆದಿದೆ. ವೀರಾಪುರ ಸರ್ವಿಸ್ ರಸ್ತೆಯ ಬಳಿ ನೋಡನೋಡುತ್ತಿದ್ದ ದಟ್ಟ ಹೊಗೆ ಆವರಿಸಿದ್ದು, ದಿಢೀರ್ ಆಗಿ ಕಾಣಿಸಿಕೊಂಡ ಬೆಂಕಿಯು ಧಗ ಧಗನೇ ಹೊತ್ತಿ ಉರಿಯತೊಡಗಿದೆ. ಇದರಿಂದ ಕ್ಷಣ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾರಿನಲ್ಲಿದ್ದವರು ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕೆಳಗಿಳಿದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ | Car Fire | ಚಲಿಸುತ್ತಿದ್ದಾಗಲೇ ಧಗ ಧಗನೆ ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರು