ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ವಿವಿಧ ರೀತಿಯ ಕಸರತ್ತು ನಡೆಸುತ್ತಿವೆ. ಈ ನಿಟ್ಟಿನಲ್ಲಿ ಮತದಾರರಿಗೆ ಹಣದ ಜತೆಗೆ ವಿವಿಧ ರೀತಿಯ ಗಿಫ್ಟ್‌ಗಳನ್ನು ನೀಡಿ ಆಮಿಷ ಒಡ್ಡುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಧಾರವಾಡ, ರಾಯಚೂರು, ವಿಜಯಪುರ ಹಾಗೂ ಶಿವಮೊಗ್ಗದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ, ಮದ್ಯ, ಕುಕ್ಕರ್, ಸೀರೆ, ಪಂಚೆ ಹಾಗೂ ಆಹಾರ ಸಾಮಗ್ರಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಧಾರವಾಡ ತಾಲೂಕಿನಲ್ಲಿ 53 ಲಕ್ಷ ರೂಪಾಯಿ ಜಪ್ತಿ
ಧಾರವಾಡ: ತಾಲೂಕಿನ ತೇಗೂರ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋವಾ ಕಾರಿನಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತಿದ್ದ 53 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ.
ಸಂಜು ಹಿರೇಮಠ ಎಂಬ ವ್ಯಕ್ತಿ ಬೆಳಗಾವಿ ಜಿಲ್ಲೆಯ ಚಿಕ್ಕೊಂಡಿಯಿಂದ ಹಾವೇರಿ ಜಿಲ್ಲೆಯ ತಡಸಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಸರಿಯಾದ ದಾಖಲೆ ತೋರಿಸದ ಕಾರಣ ಗರಗ ಪೊಲೀಸರು 53 ಲಕ್ಷ ರೂಪಾಯಿ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ ಡಿಎಸ್‌ಪಿ, ಸಿಪಿಐ ಹಾಗೂ ಗರಗ ಠಾಣೆ ಪಿಎಸ್ಐ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಶಿವಮೊಗ್ಗದಲ್ಲಿ 29.7 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳ ವಶ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ 29.70 ಲಕ್ಷ ರೂ. ಮೌಲ್ಯದ 1100 ನಾನ್ ಸ್ಟಿಕ್ ದೋಸೆ ತವಾಗಳನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 8 ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 30 ಟನ್ ತೂಕದ ಬೇಳೆ, ರವೆ, ಗೋಧಿ ಮತ್ತಿತರ ಆಹಾರ ಸಾಮಗ್ರಿ ತುಂಬಿದ್ದ 1,000 ಬ್ಯಾಗ್ ಇದ್ದವು.
ಇನ್ನು ಕೋಟೆ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂಪಾಯಿ 10 ಟನ್ ಅಕ್ಕಿ ಹಾಗೂ ರಾಗಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ, ಸೀರೆ, ಇಡ್ಲಿ ಕುಕ್ಕರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | SC-ST Reservation: ಪರಿಶಿಷ್ಟ ಜಾತಿ-ಪಂಗಡಕ್ಕೆ ಸರ್ಕಾರದಿಂದ ವಂಚನೆ; ಕಾಂಗ್ರೆಸ್ ನಾಯಕರ ಪ್ರತಿಭಟನೆ, ರಾಜ್ಯಪಾಲರಿಗೆ ದೂರು
ರಾಯಚೂರಿನಲ್ಲಿ 3 ಲಕ್ಷ ರೂಪಾಯಿ, ಕಾರು ವಶಕ್ಕೆ
ರಾಯಚೂರು: ಕರ್ನಾಟಕದ-ತೆಲಂಗಾಣ ಗಡಿಭಾಗದ ರಾಯಚೂರು ತಾಲೂಕಿನ ಶಕ್ತಿನಗರ ಚೆಕ್‌ಪೊಸ್ಟ್‌ನಲ್ಲಿ ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 3 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದು, ಕಾರಿನ ಮಾಲೀಕ ಪ್ರಕಾಶ್ ಹಾಗೂ ಚಾಲಕ ಪಂಡಿತ್ ಎಂಬುವವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ತೆಲಂಗಾಣದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದಾಗ ಕಾರನ್ನು ಶಕ್ತಿನಗರದ ಪಿಎಸ್‌ಐ ಬಸವರಾಜ್ ನೇತೃತ್ವದ ತಂಡ ತಪಾಸಣೆ ನಡೆಸಿದೆ. ಈ ವೇಳೆ ಹತ್ತಿ ವ್ಯಾಪಾರಕ್ಕೆ ಬಂದಿರುವುದಾಗಿ ಕಾರಿನ ಮಾಲೀಕ ಪ್ರಕಾಶ್ ಹೇಳಿದ್ದಾರೆ. ಆದರೆ, ಅವರ ಬಳಿ ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಕಾರು ಹಾಗೂ 3 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯಪುರದಲ್ಲಿ 5.9 ಲಕ್ಷ ರೂಪಾಯಿ ಪತ್ತೆ
ವಿಜಯಪುರ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪೊಲೀಸ್ ತಪಾಸಣೆ ವೇಳೆ ಒಟ್ಟು 5.9 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ತಾಲೂಕಿನ ಕೊಂಕಣಗಾಂವ ಚೆಕ್‌ಪೋಸ್ಟ್‌ನಲ್ಲಿ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸಾಗಿಸುತ್ತಿದ್ದ 4.4 ಲಕ್ಷ ರೂ.ಗಳನ್ನು ವಶಕ್ಕೆ ಪಡೆದು, ಬೀದರ್ ಮೂಲದ ಅನಿಲ್ ಕುಮಾರ ರಾಠೋಡ (35) ಎಂಬುವವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | 13 ವರ್ಷಗಳ ಬಳಿಕ ಬಿಜೆಪಿಗೆ ಒಲಿದ ಕಲಬುರಗಿ ಪಾಲಿಕೆ ಗದ್ದುಗೆ; ಖರ್ಗೆಗೆ ತವರಲ್ಲಿ ಹಿನ್ನಡೆ, ಫಲ ನೀಡಿದ ರೇವೂರ ಪ್ರಯತ್ನ
ಮತ್ತೊಂದು ಪ್ರಕರಣದಲ್ಲಿ ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ 1.5 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಇಳಕಲ್‌ನಿಂದ ವಿಜಯಪುರಕ್ಕೆ ಟಾಟಾ ನೆಕ್ಸಾನ್ ಕಾರಿನಲ್ಲಿ ಶಂಕರಪ್ಪ ಕಡಮಾನೂರ ಎಂಬುವವರು ತೆರಳುತ್ತಿದ್ದರು. ಅವರ ಕಾರನ್ನು ತಪಾಸಣೆ ಮಾಡಿದಾಗ ದಾಖಲೆ ಇಲ್ಲದೆ 1.5 ಲಕ್ಷ ರೂಪಾಯಿ ಕಂಡುಬಂದಿದೆ. ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಪಿಎಸ್ಐ ಎಚ್.ವೈ.ಬಾಲದಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಲಕ್ಷ್ಮೇಶ್ವರ ತಾಲೂಕಿನಲ್ಲಿ 1.9 ಲಕ್ಷ ರೂಪಾಯಿ ಸೀಜ್
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 1.90 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಅನಂತಪುರದಿಂದ ಧಾರವಾಡ ಜಿಲ್ಲೆಯ ಗುಡಗೇರಿಗೆ ಹೊರಟಿದ್ದ ಕಾರಿನಲ್ಲಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.