ಹಾಸನ: ಚನ್ನರಾಯಪಟ್ಟಣ ತಾಲೂಕಿನ ಐತಿಹಾಸಿಕ ಬೂಕನಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವವನ್ನು (Cattle festival) ರದ್ದುಪಡಿಸಿ ಹಾಸನ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶ ನೀಡಿರುವುದರ ವಿರುದ್ಧ ರೈತರು ಸಿಡಿದು ಬಿದ್ದಿದ್ದು, ಕನಿಷ್ಠ ಮೂರು ದಿನದ ಜಾತ್ರೆಗಾದರೂ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಡೆಯಲ್ಲಿ ಜಾನುವಾರು ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಇದೇ ರೀತಿ ಹಾಸನ ಜಿಲ್ಲಾಧಿಕಾರಿಗಳೂ ಆದೇಶ ಹೊರಡಿಸಿದ್ದಾರೆ.
ಜ. 6ರಿಂದ ಜ.22 ರವರೆಗೆ ಜಿಲ್ಲೆಯಾದ್ಯಂತ ರಾಸುಗಳ ಜಾತ್ರೆ, ಸಂತೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 92ನೇ ಬೂಕನಬೆಟ್ಟದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ಜನವರಿ ೯ರಿಂದ ನಡೆಯಬೇಕಾಗಿತ್ತು. ಆದರೆ, ಬೂಕನಬೆಟ್ಟದ ಪ್ರವೇಶ ದ್ವಾರದಲ್ಲಿ ಜಾನುವಾರುಗಳ ಜಾತ್ರೆ ರದ್ದು ಎಂದು ಮುಜರಾಯಿ ಇಲಾಖೆ ಪ್ರಕಟಣೆಯನ್ನು ಪ್ರಕಟಿಸಿದೆ.
ಮೂರು ದಿನ ನಡೆಸಲು ತೀರ್ಮಾನಿಸಲಾಗಿತ್ತು
ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಕಳೆದ ವಾರ ರೈತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅದರಲ್ಲಿ ಮೂರು ದಿನಗಳ ಕಾಲ ರಾಸುಗಳ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ದಿಢೀರ್ ಜಾತ್ರೆ ನಿಷೇಧ ಮಾಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಜಾನುವಾರುಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಂಡಿರುವ ರೈತರು ಮೂರು ದಿನಗಳ ಕಾಲ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ.
ಬೃಹತ್ ಜಾತ್ರೆ
ಸುಮಾರು 20 ಸಾವಿಕ್ಕೂ ಅಧಿಕ ರಾಸುಗಳು ಸೇರುವ ಬೃಹತ್ ಜಾತ್ರೆ ಇದಾಗಿದ್ದು, ಹತ್ತಾರು ಹೊರ ಜಿಲ್ಲೆಗಳಿಂದ ಸಾವಿರಾರು ಮಂದಿ ರಾಸುಗಳನ್ನು ಕೊಳ್ಳಲು ಬರುತ್ತಾರೆ. ಇದರ ಜತೆಗೆ, ಸಿಹಿ ತಿಂಡಿ, ಕೃಷಿ ಉಪಕರಣದ ಅಂಗಡಿಗಳು, ಹೋಟೆಲ್‌ಗಳು ಕೂಡಾ ಇರುತ್ತವೆ. ಆದರೆ, ತಾಲೂಕು ಆಡಳಿತ ಬೂಕನಬೆಟ್ಟಕ್ಕೆ ಬರುವ ಎರಡು ಕಡೆಗಳಲ್ಲೂ ಫ್ಲೆಕ್ಸ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ.
ಜಾನುವಾರುಗಳಿಗೆ ರೋಗ ಬಂದರೆ ನಮಗೆ ಸರ್ಕಾರದ ಪರಿಹಾರ ಬೇಡ. ಕನಿಷ್ಟ ಮೂರು ದಿನ ಜಾತ್ರೆ ನಡೆಸಲು ಅವಕಾಶ ನೀಡಿ ಎಂದು ಸ್ಥಳೀಯರು ಹಾಗೂ ರೈತರು ಒಕ್ಕೊರಲಿನಿಂದ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ | ಜಾನುವಾರುಗಳಿಗೆ ಚರ್ಮ ಗಂಟು ರೋಗ, ಹೋರಿ ಬಲಿ, ಆತಂಕದಲ್ಲಿ ಅನ್ನದಾತ