ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸದ್ಯದಲ್ಲೇ ನೀರಿನ ದರ ಏರಿಕೆ (Cauvery water) ಆಗಬಹುದು. ಈಗಾಗಲೇ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಡುವೆ ನೀರಿನ ದರ ಏರಿಕೆಗೂ ಸಜ್ಜಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ವಿದ್ಯುತ್ ದರ ಹೆಚ್ಚಳದ ಬಳಿಕ ಇದೀಗ ಜೀವಜಲ ಕೂಡ (water bill High) ತುಟ್ಟಿಯಾಗುವ ಸುಳಿವು ದೊರೆತಿದೆ.
ಇನ್ನು ಕೆಲವೇ ದಿನಗಳಲ್ಲಿ ಕುಡಿಯುವ ಕಾವೇರಿ ನೀರು ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ. ಆರ್ಥಿಕ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೀರಿನ ದರ ಏರಿಕೆಗೆ ಬಿಡಬ್ಲ್ಯೂಎಸ್‌ಎಸ್‌ಬಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಬೆಂಗಳೂರು ಜಲಮಂಡಳಿ ನಗರಾಭಿವೃದ್ಧಿ ಇಲಾಖೆಗೆ ನೀರಿನ ದರ ಪರಿಷ್ಕರಣೆಗೆ ಸಂಬಂಧ ವರದಿ ಸಲ್ಲಿಸಿದೆ.
ಬರೋಬ್ಬರಿ 9 ವರ್ಷಗಳ ಬಳಿಕ ನೀರಿನ ದರ ಏರಿಕೆಗೆ ಜಲಮಂಡಳಿ ಮುಂದಾಗಿದೆ. ನೀರಿನ ದರ ಏರಿಕೆ ಏಕೆ ಅನಿವಾರ್ಯ ಎಂಬುದರ ಬಗ್ಗೆ ಜಲಮಂಡಳಿ ಅಧಿಕಾರಿಗಳು ವಿಸ್ತೃತ ವರದಿಯನ್ನು ಸಲ್ಲಿಸಿದ್ದಾರೆ.
ಎಷ್ಟು ಏರಿಕೆ ಸಾಧ್ಯತೆ!
ಗೃಹ ಬಳಕೆ ಶೇ.30 ರಿಂದ 40, ವಾಣಿಜ್ಯ ಬಳಕೆ ಶೇ.45ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸದ್ಯ ಜಲಮಂಡಳಿ ಅಧಿಕಾರಿಗಳು ಸಲ್ಲಿಕೆ ಮಾಡಿರುವ ವರದಿಯಲ್ಲಿನ ಅಂಶಗಳನ್ನು ಬಿಟ್ಟುಕೊಡದೆ ಗೌಪ್ಯವಾಗಿ ಇಟ್ಟಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ನಗರಾಭಿವೃದ್ದಿ ಇಲಾಖೆಯ ನಿರ್ಧಾರದತ್ತ ಮೂಡಿದೆ.
ಆದಾಯ ಕುಸಿತದ ಪರಿಣಾಮ ಜಲಮಂಡಳಿಯ ಆರ್ಥಿಕ ಸ್ಥಿತಿಗೆ ತೀವ್ರ ಪೆಟ್ಟಾಗಿದೆ. ಜಲಪೂರೈಕೆಯಿಂದ ಬರುವ ಆದಾಯದಲ್ಲಿ ಬಹುತೇಕ ಪಾಲು ಕರೆಂಟ್ ಬಿಲ್‌ಗೆ ಮೀಸಲಿಡಲಾಗಿದೆ. ಮಾಸಿಕ ಸುಮಾರು 110 ಕೋಟಿ ರೂಪಾಯಿ ಆದಾಯದಲ್ಲಿ 80 ಕೋಟಿ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಲಾಗುತ್ತಿದೆ. ಉಳಿದ ಆದಾಯ ಸಿಬ್ಬಂದಿ ವೇತನ, ದುರಸ್ಥಿ ಕೊಳವೆ ಬಾವಿ ಬದಲಾವಣೆ, ಹೊಸ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಾಕಾಗುತ್ತಿಲ್ಲ. ಹೀಗಾಗಿ ಆರ್ಥಿಕ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೀರಿನ ದರ ಏರಿಕೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಪ್ರಧಾನ ಮುಖ್ಯ ಅಭಿಯಂತರ ಸುರೇಶ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ