ಬೆಂಗಳೂರು: ಪ್ರತಿ ವರ್ಷ ಸೆಪ್ಟೆಂಬರ್, ಅಕ್ಟೋಬರ್ ತಿಂಗಳು ಬಂದರೆ ಸಾಕು ಕಾವೇರಿ ನೀರಿನ ಹಂಚಿಕೆ (Cauvery Water) ವಿಚಾರಕ್ಕೆ ಕ್ಯಾತೆ ಆರಂಭವಾಗುವ ಭಯ ಕಾಡುತ್ತದೆ. ಆದರೆ, ಕಳೆದ 4 ವರ್ಷಗಳಿಂದ ಈ ಕಿರಿಕಿರಿ ನಿಂತು ಹೋಗಿದೆ. ಏಕೆಂದರೆ ಉತ್ತಮವಾಗಿ ಮಳೆ ಬೀಳುತ್ತಿರುವ ಕಾರಣ ಕಾವೇರಿ ಕೊಳ್ಳದ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನೀರಿಗೆ ಸಮಸ್ಯೆ ಎದುರಾಗುತ್ತಿಲ್ಲ. ತಮಿಳುನಾಡಿಗೆ ಕರ್ನಾಟಕದಿಂದ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದ್ದು, ಸತತ 4 ವರ್ಷಗಳಿಂದಲೂ ತಮಿಳುನಾಡಿನ ಮೆಟ್ಟೂರು ಡ್ಯಾಂ ತುಂಬಿ ತುಳುಕುತ್ತಿದೆ.
ಕಳೆದ 1 ವಾರದಿಂದ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣಕ್ಕೆ ಕರುನಾಡಿನ ಬಹುತೇಕ ಜಲಾಶಯಗಳು ಭರ್ತಿ ಆಗಿವೆ. ಅದರಲ್ಲೂ ಕಾವೇರಿ ಕೊಳ್ಳದ ಡ್ಯಾಂಗಳು ತುಂಬಿ ತುಳುಕುತ್ತಿವೆ. ಹೀಗಾಗಿಯೇ ಕರುನಾಡಿನ ಜೀವನದಿ ಕಾವೇರಿ ನದಿಯಿಂದ 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಅಧಿಕಾರಿಗಳು ಹೊರ ಬಿಡುತ್ತಿದ್ದಾರೆ. ಹೀಗಾಗಿ ತಮಿಳುನಾಡು ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕ್ಯಾತೆ ತೆಗೆಯೋದಕ್ಕೆ ಅವಕಾಶವೇ ಇಲ್ಲ.
ಇದನ್ನೂ ಓದಿ | Rain News | ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಹೆದ್ದಾರಿಯೇ ಕೊಚ್ಚಿ ಹೋಯ್ತು!
93 ಟಿಎಂಸಿ ಸಾಮರ್ಥ್ಯದ ಮೆಟ್ಟೂರು ಡ್ಯಾಂ
120 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಮೆಟ್ಟೂರು ಡ್ಯಾಂಗೆ 93 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಡ್ಯಾಂ ಭರ್ತಿಯಾಗಿದ್ದು, ಜಲಾಶಯಕ್ಕೆ 1.15 ಲಕ್ಷ ಸಾವಿರ ಕ್ಯೂಸೆಕ್ ಒಳಹರಿವಿದೆ. ಹೀಗಾಗಿ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ನೆರೆ ರಾಜ್ಯ ತಮಿಳುನಾಡಿನ ಸೇಲಂ ಸೇರಿ ಸುತ್ತಮುತ್ತಲ ಒಟ್ಟು 12 ಜಿಲ್ಲೆಗಳಿಗೆ ಮೆಟ್ಟೂರು ಜಲಾಶಯದಿಂದ ಕುಡಿಯುವ ನೀರು ಸಿಗುತ್ತಿದೆ. ಜತೆಗೆ ರೈತರ ಜಮೀನುಗಳಿಗೆ ಇದೇ ನೀರು ಬಳಕೆಯಾಗುತ್ತದೆ. 16.4 ಲಕ್ಷ ಎಕರೆ ಪ್ರದೇಶದ ಕೃಷಿಗೆ ಮೆಟ್ಟೂರು ಡ್ಯಾಂ ನೆರವಾಗಿದೆ.
2016ರಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ದೊಡ್ಡ ಗಲಾಟೆ ನಡೆದು ಎರಡೂ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತು. ಸತತವಾಗಿ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಕಳೆದ 4 ವರ್ಷಗಳಿಂದಲೂ ಮೆಟ್ಟೂರು ಡ್ಯಾಂ ತುಂಬುತ್ತಿದೆ. ಮೆಟ್ಟೂರು ಅಣೆಕಟ್ಟು 2020ರಲ್ಲಿ 6 ತಿಂಗಳ ಅವಧಿಯಲ್ಲಿ 2 ಬಾರಿ ತುಂಬಿತ್ತು. ಈ ಬಾರಿ ಕೂಡ ಅಂಥದ್ದೇ ಪರಿಸ್ಥಿತಿ ಇದೆ.
ಇದನ್ನೂ ಓದಿ | Rain News | ಮಹಾ ಮಳೆಗೆ ಕೊಡಗಿನಲ್ಲಿ ಮೊದಲ ಸಾವು