ಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಂತಹ ಸಂದರ್ಭದಲ್ಲೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಮತ್ತೆ ಬರೆ ಎಳೆದಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDTಯ ಆದೇಶದ ಪ್ರಕಾರ ಕಾವೇರಿ ನೀರು (Cauvery Dispute) ಹರಿಸಬೇಕು ಎಂದು ರಾಜ್ಯಕ್ಕೆ CWRC ಸೂಚಿಸಿದೆ.
ಫೆ.12ರಂದು ನವ ದೆಹಲಿಯಲ್ಲಿ CWRC ಯ 93ನೇ ಸಭೆ ನಡೆದಿದೆ. 2023ರ ಜೂನ್ 1ರಿಂದ 2024ರ ಫೆಬ್ರವರಿವರೆಗೆ ರಾಜ್ಯದ ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 52.43% ಇದೆ. ಅನಿಯಂತ್ರಿತ ಜಲಾನಯನ ಪ್ರದೇಶದಿಂದ ಹರಿಯುವ ನೀರು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ತಿಳಿಸಿದೆ.
ಈ ವೇಳೆ 7.61 ಟಿಎಂಸಿ ಬಾಕಿಯ (backlog )ಜೊತೆಗೆ, ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.
ಇದನ್ನೂ ಓದಿ | Karnataka Budget Session 2024: ದೇಶಕ್ಕೆ ‘ಕರ್ನಾಟಕ ಮಾದರಿ’, ಕೇಸರಿ ಯಾರೊಬ್ಬರ ಸ್ವತ್ತಲ್ಲ: ಡಿ.ಕೆ. ಶಿವಕುಮಾರ್
ಅಂತಿಮವಾಗಿ, ಫೆಬ್ರವರಿ ಮತ್ತು ಮಾರ್ಚ್ ಉಳಿದ ಅವಧಿಗೆ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಕಾವೇರಿ ಜಲವಿವಾದ ನ್ಯಾಯಾಧಿಕರಣ (CWDT)ಯ ಆದೇಶದ ಪ್ರಕಾರ ಅಂತಾರಾಜ್ಯ ಸಂಪರ್ಕ ಬಿಂದು ಬಿಳಿಗುಂಡ್ಲುನಲ್ಲಿ ಕರ್ನಾಟಕವು ನಿಗದಿತ ಪ್ರಮಾಣದ ನೀರು ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು CWRC ನಿರ್ಧರಿಸಿದೆ.