ದಾವಣಗೆರೆ: ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ಸಿಸಿಬಿ ಅಧಿಕಾರಿಗಳು (CCB Raid) ದಾಳಿ ನಡೆಸಿದ್ದಾರೆ. ದಾಳಿ ವೇಳೆ ಫಾರ್ಮ್ ಹೌಸ್‌ನಲ್ಲಿ 29ಕ್ಕೂ ಹೆಚ್ಚು ವನ್ಯಜೀವಿಗಳು ಪತ್ತೆ ಆಗಿವೆ.
ಎಸ್.ಎಸ್.ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್ ಹೌಸ್ ಮೇಲೆ ನಡೆಸಲಾಗಿದ್ದು, 7 ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, 7 ಕಾಡುಹಂದಿಗಳು, 3 ಮುಂಗುಸಿಗಳು, 2 ನರಿಗಳು ಪತ್ತೆ ಆಗಿವೆ. ಸಿಸಿಬಿ ಪೊಲೀಸರು ಪ್ರಾಣಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ದಾವಣಗೆರೆ ತಾಲೂಕಿನ ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡುತ್ತಿದ್ದ ಸೆಂಥಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸೆಂಥಿಲ್ ವಿಚಾರಣೆ ವೇಳೆ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಬಾಯ್ಬಿಟ್ಟಿದ್ದ.
ಆರೋಪಿಯ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆ ವೇಳೆ ವನ್ಯಜೀವಿಗಳು ಸಿಕ್ಕಿದ್ದು, ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿ ಪೊಲೀಸರು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜಿಂಕೆ ಸಾಕಲು ಲೈಸನ್ಸ್
ಪರವಾನಗಿ ಪಡೆದುಕೊಂಡು ವನ್ಯಜೀವಿಗಳನ್ನು ಸಾಕಿದ್ದೆವು ಎಂದು ಎಸ್‌ಎಸ್ ಮಲ್ಲಿಕಾರ್ಜುನ್ ಆಪ್ತರು ಮಾಹಿತಿ ನೀಡಿದ್ದಾರೆ. ಪರವಾನಗಿ ಪಡೆದೇ 2000ರಿಂದಲೇ ನಮ್ಮ ಫಾರ್ಮ್ ಹೌಸ್‌ನಲ್ಲಿ ಜಿಂಕೆ ಸಾಕುತ್ತಿದ್ದೆವು. ಇವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ. ಪರವಾನಗಿ ಪಡೆದು ಸಾಕುತ್ತಿದ್ದ ನಾಲ್ಕೈದು ಜಿಂಕೆಗಳು ಮರಿ ಹಾಕಿದ್ದರಿಂದ ಇವುಗಳ ಸಂಖ್ಯೆ ಈಗ ಹೆಚ್ಚಾಗಿದೆ. ಇತ್ತೀಚೆಗೆ ಜನಿಸಿದ ಮರಿಗಳ ಸಾಕುವ ಪರವಾನಗಿ ಪಡೆಯಬೇಕಿದ್ದು, ಕಾನೂನು ಪ್ರಕಾರವೇ ನಾವು ಸಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Leopard Attack | ಒಂದೇ ದಿನ ಎರಡು ಚಿರತೆ ಸೆರೆ: ಮೈಸೂರಿನಲ್ಲಿ ಬೋನಿಗೆ ಬಿತ್ತು, ಉಡುಪಿಯಲ್ಲಿ ಬಾವಿಗೆ ಬಿತ್ತು!