Site icon Vistara News

CWG-2022 | ಕಂಚು ಗೆದ್ದ ಗುರುರಾಜ ಪೂಜಾರಿ ಮನೆಯಲ್ಲಿ ಸಂಭ್ರಮ

CWG- 2022

ಕುಂದಾಪುರ : ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG-2022) ಪುರುಷರ ೬೧ ಕೆ.ಜಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಗುರುರಾಜ ಪೂಜಾರಿ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಅವರ ಪೋಷಕರು ಹಾಗೂ ಸ್ಥಳೀಯರು ಗುರುರಾಜ ಅವರು ಪದಕ ಗೆಲ್ಲುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದರು.

ಕುಂದಾಪುರ ಮೂಲದ ಕನ್ನಡಿಗ ಗುರುರಾಜ ಪೂಜಾರಿ 2018 ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಪುರುಷರ 56 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. ಹೀಗಾಗಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಗುರುರಾಜ ಅವರಿಗೆ ಎರಡನೇ ಪದಕ.

ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗೂ ಪದ್ದು ದಂಪತಿಯ ಆರು ಮಕ್ಕಳಲ್ಲಿ ಐದನೆಯವರಾದ ಗುರುರಾಜ ಪೂಜಾರಿ ಬಾಲ್ಯದಿಂದಲೂ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆಯೇ ವೇಟ್‌ಲಿಫ್ಟಿಂಗ್ ಬಗ್ಗೆ ಅಸಕ್ತಿ ತೋರಿದ್ದರು. ಆರಂಭದಲ್ಲಿ ಅವರಿಗೆ ಸುಕೇಶ್‌ ಶೆಟ್ಟಿ ತರಬೇತಿ ನೀಡಿದ್ದರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವ ವೇಳೆ ಕೋಚ್‌f ಎಂ. ರಾಜೇಂದ್ರ ಪ್ರಸಾದ್ ತರಬೇತಿ ನೀಡಿದ್ದರು. ಅಲ್ಲಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬಂದಿದ್ದ ಗುರುರಾಜ್ ಸೌತ್ ಏಷ್ಯನ್ ಗೇಮ್ಸ್ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಹೊಸ ಭರವಸೆ ಮೂಡಿಸಿದ್ದರು.

2018ರಲ್ಲಿ ನಡೆದ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಗುರುರಾಜ ಪೂಜಾರಿಗೆ ಯುವಜನಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಕಲವ್ಯ ಪ್ರಶಸ್ತಿಯೂ ಲಭಿಸಿದೆ. ಇದೀಗ ಅವರು ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಮತ್ತೊಮ್ಮೆ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 114 ಕೆಜಿ ಮತ್ತು ಎರಡನೆಯ ಯತ್ನದಲ್ಲಿ 118 ಕೆ.ಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ, ಭಾರತೀಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ತಮ್ಮ ಮೂರನೇ ಪ್ರಯತ್ನದಲ್ಲಿ 151 ಕೆ.ಜಿ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ .

Exit mobile version