ಬೆಂಗಳೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸೋಮವಾರ ಸಂಭ್ರಮದ ವಾತಾವರಣವಿತ್ತು. ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಪ್ರಮುಖ ನಾಯಕರು ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಾಮನ ಪ್ರತಿಷ್ಠಾಪನೆ ವೇಳೆ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು.
ಪ್ರಮುಖರಾದ ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ವೈ.ಎ.ನಾರಾಯಣಸ್ವಾಮಿ, ರಾಜ್ಯ ಖಜಾಂಚಿ ಸುಬ್ಬನರಸಿಂಹ, ಅಯೋಧ್ಯ ರಾಮಮಂದಿರ ದರ್ಶನ ಅಭಿಯಾನದ ಸಹ ಸಂಚಾಲಕ ಜಗದೀಶ ಹಿರೇಮನಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿ ವಿಶ್ವನಾಥ್ ಅಣಜಿ, ಮಲ್ಲೇಶ್ವರ ಮಂಡಲ ಅಧ್ಯಕ್ಷರಾದ ಕಾವೇರಿ ಕೇದಾರನಾಥ್, ಕಾರ್ಯಕರ್ತರು ಸಂಭ್ರಮೋಲ್ಲಾಸದಿಂದ ಭಾಗವಹಿಸಿದ್ದರು.
ಇದನ್ನೂ ಓದಿ | Ram Mandir: ಪ್ರಾಣಪ್ರತಿಷ್ಠಾಪನೆ ಅಭೂತಪೂರ್ವ ಕ್ಷಣ ಎಂದ ಸಚಿನ್ ತೆಂಡೂಲ್ಕರ್
ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಯಡಿಯೂರಪ್ಪ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಗಳೂರು ಮಹಾನಗರ ವತಿಯಿಂದ ಬಾಣಸವಾಡಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ನಂತರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಗಳನ್ನು ಒಗ್ಗೂಡಿಸುವ ಪವಿತ್ರ ಘಳಿಗೆ: ವಿಜಯೇಂದ್ರ
ಬೆಂಗಳೂರು: ಕೋಟಿ ಕೋಟಿ ರಾಮಭಕ್ತರ ಆಸೆ ಇವತ್ತು ಈಡೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಹಾಲಕ್ಷ್ಮೀ ಲೇಔಟ್‍ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ನಡೆದ “ಶ್ರೀರಾಮತಾರಕ ಮಹಾಯಾಗ-ಕಲಶಾಭಿಷೇಕ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಯೋಧ್ಯೆ ಮತ್ತು ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಕನ್ನಡಿಗರೂ ಇಂದು ಹೆಮ್ಮೆ ಪಡುತ್ತಿದ್ದಾರೆ. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ಇದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಚಾರ ಎಂದು ತಿಳಿಸಿದರು.
ಹಿಂದೂಗಳನ್ನು ಒಂದುಗೂಡಿಸುವ ಪವಿತ್ರ ಘಳಿಗೆ ಇಂದಿನದು. ಅಯೋಧ್ಯೆಯು ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳ. ಶ್ರೀರಾಮನ ಪರಮ ಭಕ್ತ ಹನುಮನ ಜನ್ಮಸ್ಥಳ ಕಿಷ್ಕಿಂಧೆಯು ಕರ್ನಾಟಕದಲ್ಲಿದೆ. ಬಲರಾಮನ ವಿಗ್ರಹಕ್ಕೆ ಶಿಲೆ ಕೂಡ ಕರ್ನಾಟಕದಿಂದ ಲಭಿಸಿದೆ. ಅದರ ಶಿಲ್ಪಿಗಳು ಕನ್ನಡನಾಡಿನವರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು.
ಇದನ್ನೂ ಓದಿ | Ram Mandir: ಮಂದಿರ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿದ ಮರೆಯಲಾಗದ ಮಾತುಗಳಿವು
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರು ಭಾಗವಹಿಸಿದ್ದರು.