ಶಿರಸಿ: ಯಾವುದೇ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ಗಣತಿ (Census by teachers) ಸೇರಿದಂತೆ ಇನ್ನಿತರ ಕೆಲಸಗಳಿಗೆ ಸಂಪೂರ್ಣವಾಗಿ ನಿಯೋಜಿಸುವುದನ್ನು ಸರ್ಕಾರ ಸ್ಥಗಿತಗೊಳಿಸಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಹಲವು ಕೆಲಸಗಳು ಆಗಬೇಕಿದ್ದರೆ, ಶಿಕ್ಷಕರು ಮಾತ್ರವೇ ಕಾಣುತ್ತಾರೆ. ಜನ ಗಣತಿ ಸೇರಿದಂತೆ ಇತರ ಕೆಲಸಗಳಿಗೆ ನಿಯೋಜಿಸುವುದರಿಂದ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಇತರ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸಿದರೆ ಮಕ್ಕಳಿಗೆ ಸರ್ಕಾರ ಅನ್ಯಾಯ ಮಾಡಿದಂತೆ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಬಳಿ ಮಾತನಾಡುವುದಾಗಿ ತಿಳಿಸಿದರು.
ಮೇಲಾಧಿಕಾರಿಗಳು ನೈಜ ಪರಿಸ್ಥಿತಿ ಅವಲೋಕಿಸದೆ ಮನಸ್ಸಿಗೆ ಬಂದಂತೆ ಆದೇಶ ಹೊರಡಿಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಅಧ್ವಾನವಾಗಿದೆ. ಅನೇಕ ತಪ್ಪು ನಿರ್ಧಾರಗಳು ನಡೆಯುತ್ತಿವೆ. ಇದೇ ರೀತಿ ಮುಂದುವರಿದರೆ ಕರ್ನಾಟಕ ಅತ್ಯಂತ ಹಿಂದುಳಿಯಲಿದೆ. ಈ ಕುರಿತು ಶಿಕ್ಷಣ ಸಚಿವರ ಜೊತೆಯಲ್ಲಿಯೂ ಮಾತನಾಡಿದ್ದು, ವ್ಯವಸ್ಥೆ ಸರಿಪಡಿಸಲು ಶೀಘ್ರದಲ್ಲೇ ಒಂದು ಸಭೆ ನಡೆಸುವುದಾಗಿ ತಿಳಿಸಿದರು.
ಇದನ್ನೂ ಓದಿ | Swadesh Darshan | ಕೇಂದ್ರದ ಸ್ವದೇಶ ದರ್ಶನ ಯೋಜನೆಗೆ ಮೈಸೂರು, ಹಂಪಿ ಆಯ್ಕೆ, ಹೆಮ್ಮೆಯ ಕ್ಷಣ ಎಂದ ಬೊಮ್ಮಾಯಿ
ಸರ್ಕಾರದ ಇತರ ಕೆಲಸಗಳಿಗೆ ಎಲ್ಲ ಇಲಾಖೆಯ ನೌಕರರನ್ನೂ ಬಳಸಿಕೊಳ್ಳಬಹುದು. ಕೇವಲ ಶಿಕ್ಷಕರನ್ನು ಮಾತ್ರ ಬಳಸಿದರೆ ಮಕ್ಕಳ ಶೈಕ್ಷಣಿಕ ಕುಂಠಿತಕ್ಕೆ ಕಾರಣವಾಗುತ್ತವೆ. ಮಕ್ಕಳ ಭವಿಷ್ಯ ನೋಡಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಇದಕ್ಕಾಗಿ ಎಲ್ಲ ಇಲಾಖೆಯ ಶೇ. ೧೦ರಷ್ಟು ನೌಕರರನ್ನು ಬಳಸಿಕೊಳ್ಳಬಹುದು. ಆದರೆ, ಅಧಿಕಾರಿಗಳು ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಸರ್ಕಾರ ಸಿಬ್ಬಂದಿ ಕಡಿತಗೊಳಿಸಲು ಹೊರಟಿರುವುದು ಸರಿಯಲ್ಲ. ಈ ಹಿಂದೆ ಶಾಲೆಗೆ ಅಗತ್ಯವಿರುವ ಕ್ಲರ್ಕ್, ಜವಾನರು ಸೇರಿ ಅನೇಕ ಸಿಬ್ಬಂದಿಯನ್ನು ನೀಡುತ್ತಿದ್ದರು. ಆದರೆ ಈಗ ಎಲ್ಲವನ್ನೂ ಶಿಕ್ಷಕರೇ ನಿಭಾಯಿಸುವ ಕಾರ್ಯ ಮಾಡಬೇಕಿದೆ. ಶಾಲಾ ಸ್ವಚ್ಛತೆಯನ್ನು ಮಕ್ಕಳಲ್ಲಿ ಮಾಡಿಸಿದರೆ ಅದೇ ಮರುದಿನ ದೊಡ್ಡ ಸುದ್ದಿಯಾಗಿ ಶಿಕ್ಷಕರನ್ನೇ ಅಮಾನತು ಮಾಡುವ ಕೆಲಸವೂ ಆಗಿದೆ. ಉಚಿತವಾಗಿ ಅಕ್ಕಿ, ಗೋಧಿ ಕೊಡುವ ಸರ್ಕಾರವು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಾಲೆಗೆ ಅಗತ್ಯವಿರುವ ಸಿಬ್ಬಂದಿ ನೀಡಬೇಕು ಎಂದರು.
ಇದನ್ನೂ ಓದಿ | Bengaluru-Mysuru Expressway ಹೆದ್ದಾರಿ ಮಧ್ಯೆ ಲ್ಯಾಂಡ್ ಆದ ಗಡ್ಕರಿ ಹೆಲಿಕಾಪ್ಟರ್!