ಯಾದಗಿರಿ: ಕೇಂದ್ರ ಸರ್ಕಾರವು (Central Government) ಕಳೆದ 9 ವರ್ಷಗಳಲ್ಲಿ ವಿವಿಧ ವರ್ಗದ ಜನರಿಗೆ ನೀಡಿರುವ ಯೋಜನೆಗಳು (schemes) ಅತ್ಯಂತ ಉಪಯುಕ್ತ ಹಾಗೂ ಯಶಸ್ವಿಯಾಗಿವೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ 9 ವರ್ಷಗಳ ಸೇವಾ ಸುಶಾಸನ, ಗರೀಬ್ ಕಲ್ಯಾಣ ಯೋಜನೆ ಪ್ರಧಾನಮಂತ್ರಿ ವಿಶನ್ 2047 ಏಕ ಭಾರತ-ಶ್ರೇಷ್ಠ ಭಾರತ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಇದನ್ನೂ ಓದಿ: Stock Market : ಸೆನ್ಸೆಕ್ಸ್ 302 ಅಂಕ ಜಿಗಿತ, 67,000ಕ್ಕೆ ಮೊದಲ ಬಾರಿಗೆ ದಿನದ ವಹಿವಾಟು ಮುಕ್ತಾಯ
ಪೋಷಣೆ ಅಭಿಯಾನ, ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಹೆದ್ದಾರಿ ಅಭಿವೃದ್ಧಿ, ನೂತನ ರೈಲು ಮಾರ್ಗಗಳು, ಚಂದ್ರಯಾನ-3 ಉಡಾವಣೆಯಂತಹ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಧನೆಗಳು, ಆರೋಗ್ಯ ಸೌಲಭ್ಯಗಳು ಹೀಗೆ ಎಲ್ಲಾ ಸೇವೆಗಳನ್ನು ನಾಗರಿಕರಿಗೆ ಒದಗಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂಚೂಣಿಯಲ್ಲಿದ್ದು, ಭಾರತದ ಸಾಧನೆ ದೇಶದಲ್ಲಷ್ಟೆ ಅಲ್ಲದೇ ವಿದೇಶವು ಭಾರತದತ್ತ ತಿರುಗಿ ನೋಡುವಂತೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ.ಎಸ್.ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆಯ ವಿವರವುಳ್ಳ ಈ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಎಲ್ಲರೂ ಮಾಹಿತಿಯನ್ನು ಪಡೆಯಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ದೇವೇಂದ್ರಪ್ಪ ಹಳಿಮನಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗೋಲಿ, ಚಿತ್ರಕಲೆ, ಭಾಷಣ ಸ್ವರ್ಧೆಗಳ ವಿಜೇತರಿಗೆ ಸಂಸದರು ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Rain News: ಚಿಕ್ಕಮಗಳೂರು, ಬೆಳಗಾವಿ ಸೇರಿ ವಿವಿಧೆಡೆ ಭಾರಿ ಮಳೆ; ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು
ಈ ಸಂದರ್ಭದಲ್ಲಿ ಪದವಿನಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ಡಿ.ನದಾಫ್ ಹಾಗೂ ಇತರರು ಉಪಸ್ಥಿತರಿದ್ದರು.
ಉಪನ್ಯಾಸಕ ರಾಘವೇಂದ್ರ ಭೀಮನಹಳ್ಳಿ ನಿರೂಪಿಸಿದರು. ಉರ್ದು ವಿಭಾಗದ ಮುಖ್ಯಸ್ಥ ಶಹನಾಜ್ ಬೇಗಂ ಸ್ವಾಗತಿಸಿದರು. ಕ್ಷೇತ್ರ ಪ್ರಚಾರ ಸಹಾಯಕ ನಾಗಪ್ಪ ಅಂಬಗೋಳ ವಂದಿಸಿದರು.