Site icon Vistara News

ಯಾದಗಿರಿಯಲ್ಲಿ ಸ್ಮೃತಿ ಇರಾನಿ ಪ್ರಚಾರ, ವಾರಂಟಿ ಮುಗಿದ ಕಾಂಗ್ರೆಸ್‌ ಗ್ಯಾರಂಟಿ ನಂಬದಂತೆ ಕರೆ

Smriti Irani

Smriti Irani

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರ ಮತ ಸೆಳೆಯಲು ಬಿಜೆಪಿ ಯೋಜನೆ ರೂಪಿಸಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮೂಲಕ ಭರ್ಜರಿ ಮತ ಬೇಟೆ ನಡೆಸಿತು. ಯಾದಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಪರ ಯಾದಗಿರಿ ನಗರದಲ್ಲಿ ಸ್ಮೃತಿ ಇರಾನಿ ಪ್ರಚಾರ ಕೈಗೊಂಡರು. ಹಾಗೆಯೇ, “ವಾರಂಟಿ ಮುಗಿದಿರುವ ಕಾಂಗ್ರೆಸ್‌ ಗ್ಯಾರಂಟಿಯನ್ನು ನಂಬಬಾರದು” ಎಂದು ಜನರಿಗೆ ಕರೆ ನೀಡಿದರು.

ಬಿಜೆಪಿ ಸಮಾವೇಶದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ಈ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಾತನಾಡಿ, “ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು. ಯಾದಗಿರಿ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ, ಬಡಜನರ ಕಲ್ಯಾಣಕ್ಕಾಗಿ ಬಿಜೆಪಿಗೆ ಬೆಂಬಲಿಸಿ ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು” ಎಂದು ಮನವಿ ಮಾಡಿದರು.

ಸ್ಮೃತಿ ಇರಾನಿ ಭಾಷಣ

“ಯಾದಗಿರಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ ನರ್ಸಿಂಗ್ ಕಾಲೇಜು ಆರಂಭ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು. ಇದೇ ವೇಳೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನವರು ನುಡಿದಂತೆ ನಡೆದುಕೊಂಡಿಲ್ಲ. ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಜಗಳ ನಡೆಯುತ್ತಿದೆ. ಅಷ್ಟಕ್ಕೂ, ಕಾಂಗ್ರೆಸ್‌ ವಾರಂಟಿಯೇ ಮುಗಿದಿದೆ” ಎಂದರು.

ಇದನ್ನೂ ಓದಿ: Modi In Karnataka: ಭಾನುವಾರವೂ ಇರಲಿದೆ ಬೆಂಗಳೂರಲ್ಲಿ ಮೋದಿ ಮೋಡಿ; ರೋಡ್‌ ಶೋ ಎಲ್ಲೆಲ್ಲಿ?

ಶಾಸಕ ವೆಂಕಟರೆಡ್ಡಿ ಮುದ್ನಾಳ ಪುತ್ರಿ ರಶ್ಮಿ ಅವರು ಮಾತನಾಡಿ, ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಅನೇಕ ಅಭಿವೃದ್ಧಿ ಮಾಡಿದೆ. ತಂದೆ ಅವರ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಎಲ್ಲ ಸಮಾಜದ ಜನ ಯಾವುದೆ ಗಲಾಟೆ ನಡೆಸದೆ, ಸಾಮರಸ್ಯದಿಂದ ಜೀವನ ನಡೆಸಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಂದೆಯನ್ನು ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.

Exit mobile version