ಚಿಕ್ಕಮಗಳೂರು: ಕಳೆದ ವರ್ಷ ನಿಯೋಜನೆಗೊಂಡ ಕೇಂದ್ರ ತಜ್ಞರ ಸಮಿತಿಯ ವರದಿಯ ಪ್ರಕಾರ, ಅಡಿಕೆ ಎಲೆ ಚುಕ್ಕಿ ರೋಗದ ನಿಯಂತ್ರಣಕ್ಕೆ ಬೇಕಾಗುವ ಔಷಧ, ಸ್ಪ್ರೇ, ಸಂಶೋಧನೆ ಮತ್ತು ಸಂತ್ರಸ್ತ ರೈತರಿಗೆ ಧನ ಸಹಾಯದ ಪರಿಹಾರಗಳಿಗೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ 225.73 ಕೋಟಿ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ರಾಜ್ಯ ಸರ್ಕಾರ ಶೇ.40 ಭರಿಸಲು ಸಿದ್ಧವಾಗಿ, ನಿಯಮಾನುಸಾರ ಯೋಜನೆಯ ನಿಗದಿತ ಖಾತೆಗೆ ಶೇ.40 ಹಣ ಜಮಾ ಮಾಡಿದ ತಕ್ಷಣ ಶೇ. 60 ಅನುದಾನ ಕೊಡಲು ಕೇಂದ್ರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.
ಚಿಕ್ಕಮಗಳೂರು ನಿರೀಕ್ಷಣಾ ಮಂದಿರದಲ್ಲಿ ಭಾನುವಾರ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆ ಜತೆ ಅಡಿಕೆ ಎಲೆಚುಕ್ಕಿ ರೋಗ ಸಮಸ್ಯೆಯ ಬಗ್ಗೆ ಚರ್ಚೆ ವೇಳೆ ಮಾತನಾಡಿದರು.
ಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ರಾಜ್ಯ ಸರ್ಕಾರವು ತನ್ನ ಪಾಲಿನ ಶೇ.40 ಭಾಗ ಬಿಡುಗಡೆ ಮಾಡುವಂತೆ ಅಡಿಕೆ ಬೆಳೆಯುವ ಪ್ರದೇಶದ ಶಾಸಕರು ಹಾಗೂ ಸಚಿವರು ಒಟ್ಟಾಗಿ ತೆರಳಿ ಮಾತನಾಡುವುದಾಗಿ ತಿಳಿಸಿದರು.
ಚರ್ಚೆಯಲ್ಲಿ, CPCRIನ ವಿಜ್ಞಾನಿಗಳು, ಶಿವಮೊಗ್ಗ ಕೃಷಿ ವಿವಿ ಮತ್ತು ತೋಟಗಾರಿಕೆ ಅಧಿಕಾರಿಗಳು ಎಲೆಚುಕ್ಕಿ ನಿಯಂತ್ರಣದ ಮೇಲೆ ನಡೆದ ಅಧ್ಯಯನದ ಇದುವರೆಗಿನ ಬೆಳವಣಿಗೆ, ಎಲೆ ಚುಕ್ಕಿ ರೋಗಕ್ಕೆ ಹಿಂದಿನ ವರ್ಷ ಹಾಗೂ ಈಗಾಗಲೇ ಇಲಾಖೆಗಳಿಂದ ಕೊಡುತ್ತಿರುವ ಔಷಧಿಗಳ ಪರಿಣಾಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆಯ ರೈತರ ಅನೇಕ ಪ್ರಶ್ನೆಗಳಲ್ಲಿ ಕೆಲವಷ್ಟಕ್ಕೆ ಭರವಸೆಯ ಉತ್ತರವನ್ನು ಕೇಂದ್ರ ಕೃಷಿ ಸಚಿವೆ ನೀಡಿದರು.
ಇದನ್ನೂ ಓದಿ | HD Kumaraswamy: ಬಿಜೆಪಿ ಮಂತ್ರಾಕ್ಷತೆ ಅಕ್ಕಿಯನ್ನು ಡಿಕೆಶಿ ತಮ್ಮ ದೊಡ್ಡ ಆಲದಹಳ್ಳಿಯ ತೋಟದಲ್ಲಿ ಬೆಳೆದಿದ್ದೇ?
ಅಡಿಕೆ ಎಲೆಚುಕ್ಕಿ ಮತ್ತು ಹಳದಿ ರೋಗದಿಂದ ನಶಿಸುತ್ತಿರುವ ಅಡಿಕೆ ಬೆಳೆಗೆ ಪರ್ಯಾಯ ಬೆಳೆಯಾದ ಕಾಫಿ ಬೆಳೆಯನ್ನು ಹವಾಮಾನ ಆಧಾರಿತ ವಿಮೆ ವ್ಯಾಪ್ತಿಗೆ ತರುವ ವಿಚಾರಕ್ಕೆ ಉತ್ತರಿಸಿದ ಸಚಿವರು, “ಕಾಫಿ ಬೆಳೆ ಈಗಾಗಲೇ ವಾಣಿಜ್ಯ ಬೆಳೆ ವ್ಯಾಪ್ತಿಯಲ್ಲಿ ಇರುವುದರಿಂದ ಇದನ್ನು ತೋಟಗಾರಿಕಾ ಬೆಳೆ ವ್ಯಾಪ್ತಿಯಲ್ಲಿ ತಂದಲ್ಲಿ, ಬೆಳೆ ವಿಮೆ ಅನ್ವಯವಾಗುತ್ತದೆ ಎಂದು ತಿಳಿಸಿದರು.
ವಾಣಿಜ್ಯ ಬೆಳೆ ವ್ಯಾಪ್ತಿಯಲ್ಲಿ ಕೆಲವು ಅನುಕೂಲಗಳು ಇದ್ದು, ಅದೇ ರೀತಿ, ತೋಟಗಾರಿಕಾ ವ್ಯಾಪ್ತಿಯಲ್ಲಿ ಕೆಲವೊಂದು ವಿಭಿನ್ನ ಅನುಕೂಲಗಳಿದ್ದು, ವ್ಯಾಪ್ತಿಯನ್ನು ಬದಲಾವಣೆಗೆ ಬೆಳೆಗಾರರು ಚರ್ಚಿಸಿ ಒಪ್ಪಿದಲ್ಲಿ ಮುಂದೆ ವಿಮಾ ವ್ಯಾಪ್ತಿಯಲ್ಲಿ ತರಬಹುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಅಡಿಕೆ ಹಾನಿಕಾರಕವೇ ಎಂದು ಸುಪ್ರೀಂ ಕೋರ್ಟ್ ಕೇಳಿರುವ ಪ್ರಶ್ನೆಗೆ ಈಗಾಗಲೇ ಸಲ್ಲಿಸಿದ್ದ ಖಾಸಗಿ ಲ್ಯಾಬ್ ವರದಿಯ ಬದಲಿಗೆ, 15 ದಿನಗಳಲ್ಲಿ, ಅಧಿಕೃತ ಸರ್ಕಾರಿ ಸಂಶೋಧನಾ ಸಂಸ್ಥೆಯ ವರದಿ ಸಲ್ಲಿಕೆಯ ಭರವಸೆಯನ್ನು ಕೃಷಿ ಸಚಿವೆ ನೀಡಿದರು.
ಅಡಿಕೆ ಮತ್ತು ಬೆಳೆಗಾರರನ್ನು ಉಳಿಸಿ
ಅಡಿಕೆಯ ಸಂಶೋಧನೆ, ಅಧ್ಯಯನ, ಔಷಧ, ಪರಿಹಾರ, ಸಬ್ಸಿಡಿ ಹಾಗೂ ಇತರ ಮಾರ್ಗೋಪಾಯಗಳಿಗೆ “ಕೇಂದ್ರ ಸರ್ಕಾರದ ಅಡಿಯಲ್ಲಿ, ರಾಜ್ಯ ಸರ್ಕಾರದ ಅಡಿಯಲ್ಲಿ” ಎಂಬ ವಿಷಯಗಳಿಂದ ಈಗಾಗಲೇ ಅಡಿಕೆ ಬೆಳೆಗಾರರು ಹೈರಣಾಗಿದ್ದು, ಸರ್ಕಾರಗಳು ಒಂದು ತಾತ್ವಿಕ ನಿಲುವಿಗೆ ಬಂದು, ಸೂಕ್ತ ಕ್ರಮಗಳನ್ನು ಕೈಗೊಂಡು, ಅತಿ ಶೀಘ್ರವಾಗಿ ಮಲೆನಾಡಿನಲ್ಲಿ ಅಡಿಕೆಯನ್ನೂ, ಅಡಿಕೆ ಬೆಳೆಗಾರರನ್ನೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆ ಮತ್ತೊಮ್ಮೆ ಮನವಿ ಮಾಡಿತು.
ಕೃಷಿ ಉಪಕರಣಗಳ ದಂಧೆ, ಕೇಂದ್ರ ಸರ್ಕಾರದ ‘ಎಲ್ಲಾ ರೈತರಿಗೂ ಕೊಡುವ ಮಣ್ಣು ಪರೀಕ್ಷೆಯ Soil Card’ ಯೋಜನೆ ಅನುಷ್ಠಾನ ವಿಫಲತೆ ಬಗ್ಗೆಯೂ ರೈತರು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ಅಡಿಕೆ ಎಲೆ ಚುಕ್ಕಿ ರೋಗ ಬಾಧೆ ತಾಳಲಾಗದೆ ಅನೇಕ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದರೂ ಸಂತ್ರಸ್ತ ರೈತರ ಕಡೆ ಗಮನ ಕೊಡದೆ ನಿರ್ಲಕ್ಷ್ಯ ತೋರುತ್ತಿರುವ ಎರಡೂ ಸರ್ಕಾರಗಳ ಮನಸ್ಥಿತಿಗಳ ಬಗ್ಗೆ ಸಂವಾದದಲ್ಲಿ ಸ್ಪಷ್ಟ ಉತ್ತರ, ಪರಿಹಾರಗಳು ಸಿಗಲಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಅಡಿಕೆ ಎಲೆ ಚುಕ್ಕಿ ಸಮಸ್ಯೆಗೆ ಸ್ಪ್ರೇ ಮಾಡಲು ಎಕರೆಗೆ 40,000 ರೂ. ಖರ್ಚು ಬರುತ್ತಿದ್ದು, ಸರ್ಕಾರದಿಂದ ಸಹಾಯ ಧನ ನಿರೀಕ್ಷಿಸುವಾಗ, ರೈತರು ಬೇಡವೆಂದು ಹೇಳಿದ 200 ರೂ. ಬೆಲೆ ಉಚಿತ ಔಷಧ ಕೊಟ್ಟು ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಕೈ ತೊಳೆದುಕೊಳ್ಳುತ್ತಿರುವುದು ಯಾಕೆ ಎಂದು ರೈತರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Lok Sabha Election 2024: 3ನೇ ಬಾರಿ ಮೋದಿ ಪ್ರಧಾನಿ ನಿಶ್ಚಿತ; ಬಿ.ವೈ. ವಿಜಯೇಂದ್ರ
ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆಯ ಕ್ಷೇತ್ರ ಅಧ್ಯಕ್ಷ ತಲವಾನೆ ಪ್ರಕಾಶ್, ಸಂಘಟನೆಯ ಕ್ಷೇತ್ರ ಕಾರ್ಯದರ್ಶಿಗಳಾದ ಸತೀಶ್ ಜೈನ್, ಸಂಘಟನೆಯ ಕೊಪ್ಪ ತಾಲೂಕು ಕಾರ್ಯದರ್ಶಿಗಳಾದ ಅಗಲಿ ನಾಗೇಶ್ ರಾವ್, ಸಂಘಟನಾ ಕಾರ್ಯದರ್ಶಿಗಳಾದ ಅರವಿಂದ್ ಸಿಗದಾಳ್ ಹಾಗೂ ಪದಾಧಿಕಾರಿಗಳು, ಸದಸ್ಯ ರೈತರು ಭಾಗವಹಿಸಿದ್ದರು. ಮಾಜಿ ಶಾಸಕ ಡಿ ಎನ್ ಜೀವರಾಜ್ ಮತ್ತು ಮ್ಯಾಮ್ ಕೋಸ್‌ನ ಅಧ್ಯಕ್ಷರು ಹಾಗೂ ಸದಸ್ಯರು ಸಂವಾದದಲ್ಲಿ ಉಪಸ್ಥಿತರಿದ್ದರು.
(ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ)