ಚಾಮರಾಜನಗರ: ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ಮಂಜು ಅವರ ಬಹು ವರ್ಷಗಳ ಕನಸು ಕೊನೇಗೂ ಈಡೇರಿದೆ.
ಶಿವಣ್ಣ ಅವರ ಪಕ್ಕಾ ಫ್ಯಾನ್ ಆಗಿರವ ಮಂಜು, ತನ್ನ ಅಂಗಡಿಗೆ ಬಂದು ಟೀ ಕುಡಿಯುವಂತೆ ಶಿವರಾಜ್ ಕುಮಾರ್ ಅವರಿಗೆ ಬಹಳಷ್ಟು ಸಾರಿ ಮನವಿ ಮಾಡುತ್ತಾ ಬಂದಿದ್ದರು. ಈ ಚಹಾ ಘಳಿಗೆ ಮಂಗಳವಾರ (ಜುಲೈ ೫) ದಂದು ಬಂದಿದೆ.
ಟೀ ಅಂಗಡಿಯ ಮಂಜು ಅವರು ಶಿವರಾಜ್ ಕುಮಾರ್ ಅವರ ಪ್ರತಿ ಸಿನಿಮಾದ ಮೊದಲ ಶೋ ನೋಡುವಂತಹ ಅಪ್ಪಟ ಅಭಿಮಾನಿಯಾಗಿದ್ದರು. 2016ರಿಂದಲೂ ತಮ್ಮ ಟೀ ಅಂಗಡಿಗೆ ಬರುವಂತೆ ಶಿವಣ್ಣನನ್ನು ಭೇಟಿಯಾದಾಗಲೆಲ್ಲ ಆಹ್ವಾನವನ್ನು ನೀಡುತ್ತಲೇ ಬಂದಿದ್ದರು. ಆದರೆ, ಶಿವರಾಜ್ ಕುಮಾರ್ ಅವರಿಗೆ ಚಿತ್ರೀಕರಣ ಭರಾಟೆಯ ನಡುವೆ ಇವರ ಟೀ ಅಂಗಡಿಗೆ ಭೇಟಿ ಕೊಡಲಾಗಿರಲಿಲ್ಲ. ಇತ್ತೀಚೆಗೆ ಚಾಮರಾಜನಗರದಲ್ಲೇ ನಡೆದ ಪ್ರೀ ರಿಲೀಸ್ ಈವೆಂಟ್ ಸಮಯದಲ್ಲೂ ಶಿವಣ್ಣನಿಗೆ ಅಭಿಮಾನಿಯ ಆಸೆಯನ್ನು ಈಡೇರಿಸಲಾಗಿರಲಿಲ್ಲ. ಆದರೆ, ಮಂಗಳವಾರ ಮಂಜು ಅವರ ಟೀ ಅಂಗಡಿಗೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ಅವರು ಚಹಾದ ರುಚಿ ಸವಿದಿದ್ದಾರೆ.
ಅಭಿಮಾನಿಗಳ ದಂಡು
ಶಿವರಾಜ್ ಕುಮಾರ್ ಅವರು ಟೀ ಅಂಗಡಿಗೆ ಬರುತ್ತಿದ್ದಾರೆ ಎಂದು ವಿಷಯ ತಿಳಿಯುತ್ತಿದ್ದಂತೆ, ಅಭಿಮಾನಿಗಳ ಸಾಗರವೇ ಹರಿದುಬಂದಿದೆ. ಶಿವಣ್ಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಬೇಕಾಯಿತು.
ಇದನ್ನೂ ಓದಿ| ಪುನೀತ್ ನೆನಪಿನಲ್ಲೆ ಕಾಲ ದೂಡುತ್ತಿರುವ ಅಣ್ಣ ತಂಗಿ: ಶಿವಣ್ಣನನ್ನಾದರೂ ನೋಡುವ ಬಯಕೆ