ಹಾಸನ: ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು (Congress Guarantee) ದಿನೇದಿನೆ ಸಮಸ್ಯೆಯನ್ನೇ ತಂದೊಡ್ಡುತ್ತಿವೆ. ಅದರಲ್ಲೂ 200 ಯೂನಿಟ್ ವಿದ್ಯುತ್ ಉಚಿತ, ಬಿಲ್ (Electricity Bill) ಕಟ್ಟಬೇಕಿಲ್ಲ ಎಂಬ ಗ್ಯಾರಂಟಿಯಂತೂ ಪ್ರತಿದಿನ ಗ್ರಾಹಕರು ಮತ್ತು ಕೆಇಬಿ ಸಿಬ್ಬಂದಿ ನಡುವಿನ ಗಲಾಟೆ/ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆಯಾ ನಗರದ ವಿದ್ಯುತ್ ಪೂರೈಕೆ ಸರಬರಾಜು ಕಂಪನಿಯಿಂದ ಬಿಲ್ ಸಂಗ್ರಹಕ್ಕೆ ಹೋಗುವ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸುತ್ತಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಳೇ ಕೋರ್ಟ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ಸೆಸ್ಕಾಂ ಸಿಬ್ಬಂದಿ ಸಂತೋಷ್ ಎಂಬುವರು ವಿದ್ಯುತ್ ಮೀಟರ್ ರೀಡಿಂಗ್ಗೆ ಹೋದಾಗ ಆ ಮನೆಯ ಯಜಮಾನ ಮತ್ತು ಅವನ ಅಪ್ರಾಪ್ತ ಮಗ ಸೇರಿಕೊಂಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಮನೆ ಮಾಲೀಕ ಕೋಳಿ ಅಂಗಡಿ ನಡೆಸುತ್ತಿದ್ದ. ಸೆಸ್ಕಾಂ ಸಿಬ್ಬಂದಿ ನಿನ್ನೆ ಅವರ ಮನೆಗೆ ಹೋಗಿ, ಮೀಟರ್ ರೀಡ್ ಮಾಡಿ, 1150 ರೂಪಾಯಿ ಬಿಲ್ ಕೊಟ್ಟಿದ್ದಾನೆ. ಆದರೆ ಸುರೇಶ್ ಆತನಿಗೆ ಬೈದಿದ್ದಾನೆ. ಅಲ್ಲೇ ಇದ್ದ ತನ್ನ ಮಗನೊಂದಿಗೆ ಸೇರಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾನೆ. ಸಂತೋಷ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅರಕಲುಗೂಡು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: Congress Guarantee: ಕರೆಂಟ್ ಬಿಲ್ ಕೇಳಿದ್ರೆ ಕಟ್ಟಿ ಹಾಕ್ತೇವೆ; ಸಿದ್ದರಾಮಯ್ಯ ಸ್ಟೈಲಲ್ಲೇ ಡೈಲಾಗ್!
ರಾಜ್ಯದ ಹಲವು ಭಾಗಗಳಲ್ಲಿ ಜನ ಗ್ಯಾರಂಟಿ ಅಸ್ತ್ರವನ್ನು ವಾಪಸ್ ಪ್ರಯೋಗ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿಗೆ ನಾವು ಇನ್ಮುಂದೆ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದ ಸಿದ್ದಾಪುರ ಗ್ರಾಮಕ್ಕೆ ಮೀಟರ್ ರೀಡರ್ ಹೋಗಿ ವಿದ್ಯುತ್ ಬಿಲ್ ವಿತರಿಸಲು ಮುಂದಾಗಿದ್ದಾನೆ. ಆಗ ಅಲ್ಲಿನ ಗ್ರಾಮಸ್ಥರು, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿದ್ಯುತ್ ಫ್ರೀ ಎಂದು ಆ ಪಕ್ಷ ಹೇಳಿದೆ. ಹಾಗಾಗಿ ನಾವು ಬಿಲ್ ಕಟ್ಟಲ್ಲ’ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ವಾಸುದೇವ್ ಭಟ್ ಎನ್ನುವವರು ತಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಮನೆ ಬಳಿ ಬೋರ್ಡ್ ಹಾಕಿಕೊಂಡು ಕುಳಿತಿದ್ದಾರೆ. ಒಟ್ನಲ್ಲಿ ಕಾಂಗ್ರೆಸ್ನ ಈ ಗ್ಯಾರಂಟಿ ದಿನೇದಿನೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ತಲೆನೋವು ತಂದಿಡುತ್ತಿದೆ.