Site icon Vistara News

Challakere News: ಶಿಥಿಲಾವಸ್ಥೆಯಲ್ಲಿ ದೊಡ್ಡೇರಿ ಗ್ರಾಮದ ಬಸ್ ತಂಗುದಾಣ; ದುರಸ್ತಿಗೆ ಬೇಕಿದೆ ಅನುದಾನ

bus stand in dilapidated condition at challakere taluk

ಚಳ್ಳಕೆರೆ: ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬಸ್ ತಂಗುದಾಣ (Bus stand) ಶಿಥಿಲಾವಸ್ಥೆಯಲ್ಲಿದ್ದು (Dilapidated condition) ಪ್ರಯಾಣಿಕರಿಗೆ ಇದ್ದೂ ಇಲ್ಲದಂತಾಗಿದೆ. ಇದರಿಂದಾಗಿ ನಿತ್ಯ ಬಸ್ಸಿಗಾಗಿ ಸುಡು ಬಿಸಿಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ.

ಗ್ರಾಮದಲ್ಲಿರುವ ಈ ಬಸ್ ತಂಗುದಾಣ ಬೀಳುವ ಹಂತದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಸ್ ಬರುವ ತನಕವೂ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಪಾವಗಡ ಕಡೆಗೆ ಹೋಗುವಾಗ ಸರ್ಕಾರಿ, ಖಾಸಗಿ ಬಸ್‌ಗಳು, ಆಟೋಗಳಿಗಾಗಿ ಇಲ್ಲಿ ಕಾಯುವ ಪ್ರಯಾಣಿಕರಿಗೆ ಬಿಸಿಲಿಗೆ ಸೂಕ್ತ ರಕ್ಷಣೆ ಇಲ್ಲದಂತೆ ಆಗಿದೆ. ಅಲ್ಲದೆ, ಮಳೆ ಬಂದರೂ ಸುರಕ್ಷತೆ ಇಲ್ಲವಾಗಿದೆ. ತುಂಬಾ ಹಳೆಯದಾಗಿರುವ ಈ ಬಸ್‌ ನಿಲ್ದಾಣದ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ವೇಳೆ ಬೀಳುವ ಅಪಾಯ ಎದುರಾಗಿದೆ.

ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬಸ್ ತಂಗುದಾಣದ ಹಿಂಭಾಗದ ಗೋಡೆ ಬಿರುಕು ಬಿಟ್ಟಿರುವುದು.

ಇದನ್ನೂ ಒದಿ: Congress Guarantee: ಗಿಫ್ಟ್‌ ಕೂಪನ್‌ನಿಂದ ರಾಮನಗರದಲ್ಲಿ ಸೋಲು; ಜೆಡಿಎಸ್‌ ಆರೋಪಕ್ಕೆ ಬಿಜೆಪಿ ಸಾಕ್ಷಿ!

ಇದರಿಂದ ತಂಗುದಾಣದ ಒಳಗಡೆ ಪ್ರವೇಶಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ತಾಲೂಕು ಆಡಳಿತವಾಗಲಿ ಅಥವಾ ಗ್ರಾಮ ಪಂಚಾಯಿತಿಯವರು ಸಹ ಈ ಸಮಸ್ಯೆ ಪರಿಹಾರ ಕಲ್ಪಿಸುವ ಗೋಜಿಗೆ ಹೋಗಿಲ್ಲ.
ಗ್ರಾಮದಿಂದ ಪ್ರತಿದಿನ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು, ಗ್ರಾಮಸ್ಥರು ತಮ್ಮ ದಿನನಿತ್ಯದ ಕೆಲಸಗಳಿಗೆ ತಾಲೂಕು ಕೇಂದ್ರಕ್ಕೆ ಹೋಗಬೇಕು ಎಂದರೆ ಅಗತ್ಯ ಬಸ್ಸಿಗಾಗಿ ಕಾಯಲು ಸುಸಜ್ಜಿತ ತಂಗುದಾಣದ ಅವಶ್ಯಕತೆ ಇದೆ. ಆದರೆ, ಈ ಬಗ್ಗೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ನಿರ್ವಹಣೆ ಕೊರತೆ

ತಾಲೂಕಿನ ಹಲವು ಗ್ರಾಮೀಣ ಪ್ರದೇಶದ ಅನೇಕ ಮುಖ್ಯರಸ್ತೆಗಳಲ್ಲಿ ಬಸ್‌ ತಂಗುದಾಣ ಇಲ್ಲದೆ ಜನತೆ ಬಿರುಬಿಸಿಲಿನಲ್ಲಿ ಬಸ್ಸಿಗಾಗಿ ಕಾದು ನಿಂತು ಹೈರಾಣಾಗುತ್ತಿದ್ದಾರೆ, ಇರುವ ಬಸ್‌ ತಂಗುದಾಣಗಳು ನಿರ್ವಹಣೆ ಇಲ್ಲದೆ ಬೀಳುವ ಸ್ಥಿತಿಯಲ್ಲಿವೆ. ಕೆಲವು ಪಡ್ಡೆ ಹುಡುಗರ ಅಡ್ಡೆಗಳಾಗುತ್ತಿವೆ.

ಇದನ್ನೂ ಓದಿ: NIA Raid: ಮಧ್ಯಪ್ರದೇಶದಲ್ಲಿ ಐಸಿಸ್‌ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ

ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ಅನುಕೂಲ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Exit mobile version