Site icon Vistara News

Challakere News: ಬರದ ನಾಡಲ್ಲಿ ಬಂಪರ್ ಕಾಫಿ ಬೆಳೆ ಬೆಳೆದ ರೈತ; ಅಡಿಕೆ ತೋಟದ ಮಧ್ಯೆ ಕಾಫಿ ವಿಥ್‌ ಕಾಳಮೆಣಸು ಯಶಸ್ವಿ

coffee crop Challakere

#image_title

ಸುರೇಶ ಬೆಳೆಗೆರೆ, ಚಳ್ಳಕೆರೆ
ಸಾಮಾನ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ. ಬಯಲು ನಾಡು ಬರೆದ ನಾಡು ಎಂದೇ ಪ್ರಖ್ಯಾತಿ ಗಳಿಸಿರುವ ಚಳ್ಳಕೆರೆ ತಾಲೂಕಿನ ಭರಮಸಾಗರದ (Bharamsagar) ರೈತರೊಬ್ಬರು ಅಡಿಕೆ ಬೆಳೆಗಳ ನಡುವೆ ಕಾಫಿ ಬೆಳೆದಿದ್ದಾರೆ.

ರೈತ ಎಚ್.ಎಸ್. ತಿಪ್ಪೇಸ್ವಾಮಿ ಹೊಸಮನೆ ತಮ್ಮ 30 ಎಕರೆ ಭೂಮಿಯನ್ನು ಸಮಗ್ರ ಕೃಷಿಗೆ ಅಳವಡಿಸಿಕೊಳ್ಳುವ ಮೂಲಕ ಬಯಲು ಸೀಮೆಯಲ್ಲೂ ಕಾಫಿ ಮತ್ತು ಕಾಳು ಮೆಣಸು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ ನಗರದಿಂದ 10 ಕಿ.ಮೀ. ದೂರವಿರುವ ಭರಮಸಾಗರ ಸಮೀಪದ ಜಮೀನಿನಲ್ಲಿ ಸುಮಾರು 12-15 ವರ್ಷದ 300 ತೆಂಗಿನ ಗಿಡಗಳು, 11500 ಅಡಿಕೆ ಮರಗಳ ಕೃಷಿ ಬೆಳೆಗೆ 5 ಬೋರ್‌ವೆಲ್‌ಗಳ ನೀರಿನ ಆಶ್ರಯವಿದೆ. ಸಮಗ್ರ ಕೃಷಿಗೆ ತೊಡಗಿಕೊಂಡಿರುವ ರೈತ ಒಂದು ಸಾವಿರ ಗಿಡಗಳ ದಾಳಿಂಬೆ, ಒಂದಿಷ್ಟು ಮಾವು, ಸಪೋಟೋ ಸೇರಿದಂತೆ ವಿವಿಧ ಬೆಳೆಗಳನ್ನು ಸಮೃದ್ಧಿಯಾಗಿ ಪೋಷಣೆ ಮಾಡಿಕೊಂಡಿದ್ದಾರೆ.

ಕಾಫಿ ಬೆಳೆ

11500 ಅಡಿಕೆ ಗಿಡಗಳ ಬೆಳೆಯ ನಡುವೆ 8×8 ಅಂತರ ಬೆಳೆಯಾಗಿ 6 ಸಾವಿರ ಕಾಫಿ ಗಿಡ ಮತ್ತು 6 ಸಾವಿರ ಕಾಳು ಮೆಣಸು ನೆಡಲಾಗಿದೆ. ಈಗಾಗಲೇ 3 ವರ್ಷ ಕಳೆದಿರುವ ಕಾಫಿ ಗಿಡಗಳು ಸಮೃದ್ಧಿಯಾಗಿ ಬೆಳೆದುಕೊಂಡು ಹೂ ಕಟ್ಟಿವೆ. ಇದರ ನಡುವೆ ಅಡಿಕೆ ಗಿಡಗಳ ಆಶ್ರಯಿಸಿ ಬಹು ಎತ್ತರಕ್ಕೆ 6 ಸಾವಿರ ಕಾಳು ಮೆಣಸು ಬಳ್ಳಿ ಬೆಳೆದುಕೊಂಡಿದೆ. ಎರಡೂ ಬೆಳೆಗಳನ್ನು ಸಾವಯವ ಗೊಬ್ಬರ ಮತ್ತು ಜೀವಾಮೃತ ಬಳಸುವಲ್ಲಿ ಪೋಷಣೆ ಮಾಡಿಕೊಂಡು ಉತ್ತಮ ಫಸಲಾಗುವಂತೆ ನೋಡಿಕೊಳ್ಳಲಾಗಿದೆ. ಒಂದು ವರ್ಷ ಅವಧಿಯೊಳಗೆ ಲಾಭದಾಯಕ ಫಸಲು ಕೈಗೆ ಸಿಗುವ ನಿರೀಕ್ಷೆ ರೈತನದಾಗಿದೆ.

ಶೃಂಗೇರಿ ಕೊಪ್ಪದಿಂದ ರಬೋಸ್ಟ್ ತಳಿಯ ಕಾಫಿ ಒಂದು ಗಿಡಕ್ಕೆ 10 ರೂ.ನಂತೆ 6 ಸಾವಿರ, ಪನೀಯೂರ್ ಗಿಡಗಳನ್ನು ಒಟ್ಟು 2.5 ಲಕ್ಷಕ್ಕೆ ಖರೀದಿ ಮಾಡಿಕೊಂಡು ಬರಲಾಗಿದೆ. ತೋಟದಲ್ಲಿ ನಾಟಿ ಮಾಡಲು ಮತ್ತು ಅಡಿಕೆ ಗಿಡಗಳ ನಡುವೆ ತುಂತುರು ಹನಿ ಸಾಮಗ್ರಿಗಳ ಅಳವಡಿಕೆ ಸೇರಿದಂತೆ ತೋಟದ ಮಧ್ಯದಲ್ಲಿ ಮಳೆ ನೀರು ನಿಲ್ಲದಂತೆ ಹೊರ ಹರಿದು ಹೋಗಲು ಮಾಡಿರುವ ವ್ಯವಸ್ಥೆಗೆ ಒಟ್ಟು 4 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

ಇದನ್ನೂ ಓದಿ: BJP Karnataka: ʼಅಪ್ಪನನ್ನು ಮರೆತʼ ಬಿಜೆಪಿ ವಿರುದ್ಧ ಅನಂತಕುಮಾರ್‌ ಪುತ್ರಿ ಅಸಮಾಧಾನ

ಪಶು ಸಾಕಾಣಿಕೆ

ಸುಮಾರು 30 ಎಕರೆ ಸಮಗ್ರ ಬೆಳೆಯನ್ನು ಕಾಪಾಡಿಕೊಳ್ಳಲು ಪ್ರತಿ ಬೆಳೆಗೆ 100 ರಿಂದ 150 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಬೇಕಾಗುತ್ತದೆ. ಇದರ ಅನುಕೂಲಕ್ಕೆ ಪ್ರತ್ಯೇಕ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು 25 ರಾಸುಗಳನ್ನು ಸಾಕಲಾಗಿದೆ. ಇದನ್ನು ಹೈನುಗಾರಿಕೆಗೆ ಬಳಕೆ ಮಾಡಿಲ್ಲ. ಕೇವಲ ಸಗಣಿ ಮತ್ತು ಗಂಜಲ ಸಂಗ್ರಹಕ್ಕೆ ಸಾಕಲಾಗಿದೆ. ರಾಸುಗಳಿಂದ ಸಂಗ್ರಹವಾಗುವ ಸಗಣಿ ಮತ್ತು ಗಂಜಲವನ್ನು ಗೋಬರ್ ಗ್ಯಾಸ್ ಬಳಕೆ ಮೂಲಕ ಮಿಶ್ರಣ ಮಾಡಿ, ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟು ಕಲಬೆರಿಕೆ ಮಾಡಿದ ಜೀವಾಮೃತ ಸೇರಿಸಿ ದೊಡ್ಡದಾದ ತೊಟ್ಟಿಯಲ್ಲಿ ಸಂಗ್ರಹ ಮಾಡಿದ ಪರಿಸರದ ಸೊಪ್ಪು ಮತ್ತು ಕೊಟ್ಟಿಗೆ ಗೊಬ್ಬರಕ್ಕೆ ಹರಿಬಿಡಲಾಗುತ್ತದೆ. ಇದರಿಂದ ಪ್ರತಿದಿನ 15 ರಿಂದ 18 ಸಾವಿರ ಲೀಟರ್ ಜೀವಾಮೃತ ಬಳಕೆಯಲ್ಲಿ ಗಿಡಗಳಿಗೆ ಯಾವುದೇ ರೋಗಬಾಧೆ ಆಗದಂತೆ ಸಮೃದ್ಧಿಯಾಗಿ ಬೆಳಸಿದ್ದಾರೆ. ಅಲ್ಲಲ್ಲಿ ಗಿಡಗಳ ನಡುವೆ ಜೇನು ಸಾಕಾಣಿಕೆ ಕೃಷಿಯೂ ಮಾಡಲಾಗಿದೆ. ತೋಟದ ಬೆಳೆ ಪೋಷಣೆಗೆ ಪ್ರತಿದಿನ 10 ಕಾರ್ಮಿಕರ ಶ್ರಮ ಇಲ್ಲಿದೆ.

ಇದನ್ನೂ ಓದಿ: Ram Navami 2023: ಬೆಂಗಳೂರಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆದೇಶ

ನೀರಿನ ಸಂಗ್ರಹ

ಬರಗಾಲದ ಪರಿಸ್ಥಿತಿಯಲ್ಲೂ ತೋಟವನ್ನು ಹಾಳಾಗದಂತೆ ನೋಡಿಕೊಂಡಿರುವ ಇವರು 120×90 ಅಡಿ ಉದ್ದದ ಸುಸಜ್ಜಿತ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 70 ಸಾವಿರ ರೂ. ಬೆಲೆಯ ದೊಡ್ಡದಾದ ತಾಡಪಲ್ ಬಳಕೆ ಮಾಡಲಾಗಿದೆ. ನೀರಿನ ತೊಟ್ಟಿಗೆ ಟ್ರ್ಯಾಕ್ಟರ್ ನೀರು ಸಂಗ್ರಹಿಸಿ ತೋಟದ ಬೆಳೆ ರಕ್ಷಣೆ ಮಾಡಿಕೊಂಡಿದ್ದಾರೆ. ಪ್ರಸ್ತುತ 5 ಬೋರ್‌ವೆಲ್‌ಗಳಿಂದ ಸಮೃದ್ಧಿಯಾಗಿ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಬಯಲುಸೀಮೆಯ ಮಣ್ಣಿನ ನೆಲದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆ ಅಷ್ಟಾಗಿ ಫಸಲು ನೀಡುವುದಿಲ್ಲ ಎನ್ನುವ ಆಂತಕ ಇತ್ತು. ಆದರೂ, ಪ್ರಯತ್ನ ಮಾಡಿ ನಾಟಿ ಮಾಡಲಾಗಿದೆ. ಈ ಭಾಗದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮನಸ್ಸಿರಲಿಲ್ಲ. 3 ವರ್ಷದ ಬಳಿಕ ಸಮೃದ್ಧಿಯಾಗಿ ಬೆಳೆ ಬೆಳೆದಿರುವ ಕಾರಣ, ನಮ್ಮ ಭೂಮಿಯಲ್ಲೂ ಕಾಫಿ ಬೆಳೆ ದಕ್ಕುತ್ತದೆ ಎನ್ನುವ ವಿಶ್ವಾಸ ಮೂಡಿದಂತಾಗಿದೆ ಎಂದು ರೈತ ತಿಪ್ಪೇಸ್ವಾಮಿ ಹೇಳಿದ್ದಾರೆ. ಗುಟ್ಕಾ ಪದಾರ್ಥಗಳ ನಿಷೇಧದಿಂದ ಕೆಲವೊಮ್ಮೆ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತದೆ. ಸುಮಾರು 15-20 ವರ್ಷ ಅಡಿಕೆ ಬೆಳೆಯನ್ನು ಸೀಮಿತ ನಿರೀಕ್ಷೆ ಇಟ್ಟುಕೊಳ್ಳದೆ ಅಂತರ ಬೆಳೆ ಬೆಳೆಯುವ ಮೂಲಕ ಕಾಫಿ ಮತ್ತು ಕಾಳುಮೆಣಸು ಬೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IPL 2023: ಗೆಳೆಯ ಕೊಹ್ಲಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಬಿಡಿ; ವಿಡಿಯೊ ವೈರಲ್​

ರೈತ ತಿಪ್ಪೇಸ್ವಾಮಿ ಸುಮಾರು 15 ಎಕರೆ ಅಡಿಕೆ ಫಸಲು ನಡುವೆ ಕಾಫಿ ಮತ್ತು ಕಾಳುಮೆಣಸು ಬೆಳೆದು ಬಯಲುಸೀಮೆಯಲ್ಲಿ ಕಾಫಿ ಬೆಳೆಯ ಯಶಸ್ವಿ ಕಂಡಿದ್ದಾರೆ. ಉತ್ತಮ ಇಳುವರಿ ಬಂದಲ್ಲಿ ಕಾಫಿ ಬೆಳೆಯು ಕ್ವಿಂಟಾಲ್‌ಗೆ 15 ಸಾವಿರ ರೂಪಾಯಿ, ಒಂದು ಕೆಜಿ ಕಾಳುಮೆಣಸಿಗೆ 400 ರೂ.ನಂತೆ ಬೆಲೆ ಸಿಗುತ್ತದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ತಿಳಿಸಿದ್ದಾರೆ.

Exit mobile version