ಚಾಮರಾಜನಗರ: ಕಾರು ಖರೀದಿಗೆ ಮುಂಗಡ ಹಣ ಪಾವತಿಸಿದ್ದ ಗ್ರಾಹಕನಿಗೆ ನಾಲ್ಕು ತಿಂಗಳಾದರೂ ಕಾರು ನೀಡದ ಹಿನ್ನೆಲೆಯಲ್ಲಿ ಶೋ ರೂಮ್ (Car Showroom) ಬಾಗಿಲು ಮುಚ್ಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಇನೋವಾ ಕ್ರಿಸ್ಟಾ ಕಾರು ಖರೀದಿಸಲು ನಗರದ ನಾಗೇಂದ್ರ ಎಂಬಾತ, ಟೊಯೊಟಾ ಶೋ ರೂಮ್‌ಗೆ ಆಗಸ್ಟ್ 20ರಂದು ೧ ಲಕ್ಷ ರೂಪಾಯಿ ಮುಂಗಡ ಪಾವತಿಸಿದ್ದರು. ನಾಲ್ಕು ತಿಂಗಳಾದರೂ ಕಾರು ಬಾರದ ಹಿನ್ನೆಲೆಯಲ್ಲಿ ವಿಚಾರಿಸಲು ಬಂದಾಗ ಬುಕ್ಕಿಂಗ್ ಮಾಡೇ ಇಲ್ಲ, ಮುಂಗಡ ಕೊಟ್ಟೆ ಇಲ್ಲ, ನೀವು ತೋರಿಸುತ್ತಿರುವುದು ನಕಲಿ ರಸೀದಿ ಎಂದು ಶೋ ರೂಂ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಹಕ ಹಾಗೂ ಸ್ಥಳೀಯರು ತೀವ್ರ ವಿಚಾರಣೆ ನಡೆಸಿದಾಗ ಶೋ ರೂಂನವರದ್ದೇ ತಪ್ಪಿರುವುದಾಗಿ ಗೊತ್ತಾಗಿದೆ. ಹೀಗಾಗಿ ಶೋ ರೂಮ್‌ಗೆ ಬಾಗಿಲು ಹಾಕಿಸಲಾಗಿದೆ.
ಡೀಸೆಲ್ ಓರಿಯೆಂಟೆಡ್ ಕಾರು ಈಗ ಬರುತ್ತಿಲ್ಲ. ಹೀಗಾಗಿ ನಾಗೇಂದ್ರಗೆ ಕಾರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಶೋ ರೂಂ ಸಿಬ್ಬಂದಿ ಹೇಳಿದ್ದಾರೆ. ನನಗೆ ಬುಕ್ ಆಗಿದ್ದ ಕಾರನ್ನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ನಾಗೇಂದ್ರ ಆರೋಪಿಸಿದ್ದಾರೆ.
ಶೋ ರೂಮ್‌ಗೆ ಬೀಗ ಹಾಕಿಸಿ ಅಲ್ಲಿದ್ದ ಸೇಲ್ಸ್ ಎಕ್ಸಿಕ್ಯೂಟಿವ್ ಶಿವರಾಜ ಎಂಬುವರನ್ನು ಮೈಸೂರಿನ ಮುಖ್ಯ ಶೋ ರೂಂಗೆ ಗ್ರಾಹಕ ಕರೆದುಕೊಂಡು ಹೋಗಿದ್ದಾರೆ. ನಾಗೇಂದ್ರ ಹಣ ಪಾವತಿಸಿದ್ದು ಸಣ್ಣಪುಟ್ಟ ವ್ಯತ್ಯಾಸದಿಂದ ಕಾರು ಬಂದಿಲ್ಲ. ಮೇಲಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸೇಲ್ಸ್ ಎಕ್ಸಿಕ್ಯೂಟಿವ್ ಶಿವರಾಜ ತಿಳಿಸಿದ್ದಾರೆ.
ಇದನ್ನೂ ಓದಿ | Sirsi News | ಒಂದೇ ಗ್ಯಾಂಗ್‌ನಿಂದ ಆರು ಕಡೆ ದರೋಡೆ