| ಸಾಗರ್ ಕುಮಚಹಳ್ಳಿ, ಚಾಮರಾಜನಗರ
ಕಾಡಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿರುತ್ತದೆ. ಅದೇ ರೀತಿ ಗಡಿ ಜಿಲ್ಲೆ ಚಾಮರಾಜ ನಗರದ ಕಾಡಂಚಿನ ಭಾಗಗಳಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶಪಡಿಸುತ್ತಿವೆ. ಇದು ಕೃಷಿಯನ್ನೇ ನಂಬಿ ಬದುಕುತ್ತಿರುವ ಇಲ್ಲಿನ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಆನೆ, ಕಾಡುಹಂದಿ ಸೇರಿ ಇತರ ವನ್ಯಪ್ರಾಣಿಗಳ ಹಾವಳಿಯಿಂದ ಪಾರಾಗಲು ಪರ್ಯಾಯ ಬೆಳೆಯತ್ತ ಕೃಷಿಕರು ದೃಷ್ಟಿ ನೆಟ್ಟಿದ್ದಾರೆ. ಆ ಬೆಳೆಯ ಹೆಸರೇ ಚಿಯಾ (Chia Seeds Cultivation). ಈ ಬೆಳೆಯನ್ನು ಗೇಲ್ ಎಂದು ಸಹ ಕರೆಯುತ್ತಾರೆ.
ಜಿಲ್ಲೆಯ ಪುಣಜೂರು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಇರುವ ಅಕ್ಷರ ಕಲಿಯದ, ಆಧುನಿಕತೆ ತಿಳಿಯದ ಮುಗ್ಧ ಜನರು ಕೃಷಿಯನ್ನೇ ನಂಬಿದ್ದಾರೆ. ಆದರೆ, ವನ್ಯ ಪ್ರಾಣಿಗಳು ಕೃಷಿ ಬೆಳೆಗಳನ್ನು ನಾಶಪಡಿಸುತ್ತಿರುವುದರಿಂದ ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಈ ಭಾಗದ ಜನರು ʼಚಿಯಾ ಬೆಳೆʼಯನ್ನು ಬೆಳೆಯಲು ಆರಂಭಿಸಿದ್ದಾರೆ.
ಇದನ್ನೂ ಓದಿ | BlackBuck | ಕಾಡಿನಿಂದ ಬಂದ ಕೃಷ್ಣ ಮೃಗವನ್ನು ಅಟ್ಟಾಡಿಸಿದ ನಾಯಿಗಳು, ಆಸ್ಪತ್ರೆ ಪ್ರವೇಶಿಸಿದ್ದರಿಂದ ಉಳಿಯಿತು ಜೀವ!
ಈ ಬೆಳೆಯ ವಿಶೇಷವೆಂದರೆ ಕಾಡುಪ್ರಾಣಿಗಳು ಈ ಬೆಳೆಯನ್ನು ನಾಶಪಡಿಸುವುದಿಲ್ಲ ಎನ್ನುವುದು. ಈ ಹಿಂದೆ ರೈತರು ಬೆಳೆದ ಬೆಳೆಯನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತಿದ್ದವು. ಹಾಗಾಗಿ ಇಲ್ಲಿನ ರೈತರೆಲ್ಲ ಚಿಯಾ ಬೆಳೆ ಬೆಳೆಯಲು ಮುಂದಾಗಿದ್ದೇವೆ. ಇದನ್ನು ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಇದೀಗ ಚಾಮರಾಜನಗರಕ್ಕೂ ವಿಸ್ತರಿಸಿಕೊಂಡಿರ. ಸದ್ಯ ಕಾಡಂಚಿನ ಪ್ರದೇಶದಲ್ಲಿರುವ ರೈತರು ಇದನ್ನೇ ಬೆಳೆಯಲು ಮುಂದಾಗುತ್ತಿದ್ದಾರೆ ಎಂದು ರಂಗಸಂದ್ರ ನಿವಾಸಿ ಕಬ್ಬನಾಯಕ ಹೇಳಿದ್ದಾರೆ.
ಎಳ್ಳು ಕಾಳು ಮಾದರಿಯ ಚಿಯಾ ಬೆಳೆ
ಇನ್ನು ವಿದೇಶಿ ಬೆಳೆಯಾಗಿರುವ ಚಿಯಾ ಮೂರು ತಿಂಗಳ ಬೆಳೆಯಾಗಿದ್ದು, ಎಳ್ಳು ಕಾಳು ಮಾದರಿಯಲ್ಲೇ ಇರುತ್ತದೆ. ಇದನ್ನು ಸ್ಥಳೀಯವಾಗಿ ಮಾರಾಟ ಮಾಡಲು ಆಗಲ್ಲ. ವಿದೇಶಗಳಿಗೆ ರಫ್ತಾಗುವ ಪದಾರ್ಥ ಇದಾಗಿದ್ದು, ಎಕರೆಗೆ ಐದರಿಂದ ಆರು ಕ್ವಿಂಟಾಲ್ ಇಳುವರಿ ಪಡೆಯಬಹುದಂತೆ. ಪ್ರತಿ ಕ್ವಿಂಟಾಲ್‌ಗೆ 15 ರಿಂದ 20 ಸಾವಿರ ದರ ಸಿಗುತ್ತದೆ. ರಾಗಿ, ಜೋಳ, ಭತ್ತದಂತೆ ಬೆಳೆ ಮಾಡಿ ಕಾಡು ಪ್ರಾಣಿಗಳಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಪರ್ಯಾಯ ಬೆಳೆಯತ್ತ ಗಮನ ಹರಿಸಿದ್ದೇವೆ. ಈ ವರ್ಷವೇ ಮೊದಲ ಬಾರಿಗೆ ಗೇಲ್ ಬೆಳೆಯಲು ಮುಂದಾಗಿದ್ದೇವೆ ಎಂದು ರೈರ ನಾಗಾನಾಯ್ಕ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ
ಇತರ ಸಾಮಾನ್ಯ ಬೆಳೆಗಳಿಗೆ ಹೋಲಿಕೆ ಮಾಡಿದರೆ ಚಿಯಾ ಬೀಜದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ. ಹೀಗಾಗಿ ಚಿಯಾ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಒಣ ಬೀಜಗಳನ್ನು ನೇರವಾಗಿ ತಿನ್ನಬಾರದು. ಹೀಗಾಗಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಲಾಗುತ್ತದೆ. ಚಿಯಾ ಬೀಜಗಳು ಉತ್ತಮ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಒಮೇಗಾ-3 ಕೊಬ್ಬಿನಾಮ್ಲ ಹೊಂದಿರುವುದರಿಂದ ಶರಬತ್ತು, ಬಿಸ್ಕೆಟ್, ತರಕಾರಿ ಸಲಾಡ್, ಕೇಕ್, ಚಾಕೊ ಲೆಟ್, ಐಸ್‌ಕ್ರೀಂ, ಮಿಲ್ಕ್ ಶೇಕ್‌ನಲ್ಲಿ ಬಳಸುತ್ತಾರೆ.
ಇದನ್ನೂ ಓದಿ | No Road | ಗುಡ್ಡದ ಮೇಲಿನ ಈ ಗ್ರಾಮಕ್ಕಿಲ್ಲ ರಸ್ತೆ; ಆರೋಗ್ಯ ಕೆಟ್ಟರೆ ಜೋಳಿಗೆಯಲ್ಲೇ ಹೊತ್ತೊಯ್ಯುವ ಅವಸ್ಥೆ