ಚಾಮರಾಜನಗರ: ಕಾಡಾನೆಗೆ ಕಬ್ಬು ನೀಡಿದ ರಾಜ್ಯದ ಲಾರಿ ಚಾಲಕನಿಗೆ ತಮಿಳುನಾಡು ಅರಣ್ಯಾಧಿಕಾರಿಗಳು ಭಾರಿ ದಂಡ ವಿಧಿಸಿದ್ದಾರೆ. ಚಾಮರಾಜ ನಗರದ ಕಡೆಯಿಂದ ತಮಿಳು ನಾಡಿಗೆ ಲಾರಿಯಲ್ಲಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದಾಗ ಚಾಲಕ ಕಾಡಾನೆಗೆ ಕಬ್ಬು ನೀಡಿದ್ದ. ಹೀಗಾಗಿ ಚಾಲಕನಿಗೆ ಬರೋಬ್ಬರಿ 75,000 ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ತಮಿಳುನಾಡಿನ ಹಾಸನೂರು ಬಳಿ ನಂಜನಗೂಡು ಮೂಲದ ಲಾರಿ ಚಾಲಕ ಸಿದ್ದರಾಜು ಎಂಬಾತ ಕಾಡಾನೆಗೆ ಕಬ್ಬು ನೀಡಿದ್ದ. ಹೀಗಾಗಿ ಚಾಲಕನಿಗೆ ಸತ್ಯಮಂಗಲಂ ಅರಣ್ಯಾಧಿಕಾರಿಗಳು ಭಾರಿ ದಂಡ ವಿಧಿಸಿದ್ದಾರೆ. ಕಾಡು ಪ್ರಾಣಿಗಳಿಗೆ ಆಹಾರ ಪದಾರ್ಥ ನೀಡಬಾರದೆಂಬ ನಿಯಮವಿದ್ದರೂ ಕಾಡಾನೆಗಳಿಗೆ ಕೆಲವು ಲಾರಿ ಚಾಲಕರು ಕಬ್ಬು ನೀಡುತ್ತಿರುತ್ತಾರೆ. ಇದನ್ನು ತಡೆಯಲು ಅರಣ್ಯಾಧಿಕಾರಿಗಳು ದಂಡದ ಅಸ್ತ್ರ ಪ್ರಯೋಗಿಸಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿಭಾಗದ ಸತ್ಯಮಂಗಲಂ ಅರಣ್ಯ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಬ್ಬಿನ ಆಸೆಗೆ ರಸ್ತೆ ಬದಿ ಬಂದು ನಿಲ್ಲುವ ಕಾಡಾನೆಗಳು, ಕೆಲವೊಮ್ಮೆ ವಾಹನಗಳ ಮೇಲೂ ದಾಳಿ ನಡೆಸುತ್ತವೆ. ಹೀಗಾಗಿ ಚಾಲಕರು ಹೆದರಿ ಕಾಡಾನೆಗಳಗೆ ಕಬ್ಬು ನೀಡುವುದು ಸಾಮಾನ್ಯವಾಗಿದೆ.
ವನ್ಯಪ್ರಾಣಿಗಳಿಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಬಾರದು. ಒಂದು ವೇಳೆ ನೀಡಿದರೆ ಪ್ರಾಣಿಗಳು ಜನರು ನೀಡುವ ಆಹಾರಕ್ಕೆ ಹೊಂದಿಕೊಂಡು ರಸ್ತೆಗೆ ಬಂದು ಜನರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿರುತ್ತವೆ ಎಂದು ವನ್ಯಪ್ರಾಣಿಗಳಿಗೆ ಆಹಾರ ನೀಡುವುದಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ | Border dispute | ಪುಣೆಯಲ್ಲಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಕ ಶಿವಸೇನೆ ಪುಂಡರು, ಬಸ್ ಸಂಚಾರ ಬಂದ್