ಕೊಳ್ಳೇಗಾಲ: ಈದ್ ಉಲ್ ಫಿತ್ರ್ ದಿನದಂದೆ ಕೊಳ್ಳೆಗಾಲದಲ್ಲಿ ಮುಸ್ಲಿಮರ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ.
ಈ ಘರ್ಷಣೆಯಲ್ಲಿ 12 ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಲಿ ನಗರಸಭಾ ಸದಸ್ಯ ನಾಸೀರ್ ಷರೀಫ್( ಬಬ್ಲು) ಹಾಗೂ ಮಾಜಿ ಸದಸ್ಯ ಕಿಜರ್ ಬೆಂಬಲಿಗರ ನಡುವೆ ಬಡಿದಾಟಗಳು ನಡದಿವೆ. ಘರ್ಷಣೆಯಲ್ಲಿ ಸಾಮಂದಗೇರಿ ಬಡಾವಣೆಯ ನಿವಾಸಿ, ಕಾಂಗ್ರೆಸ್ ಮುಖಂಡ ಮಹಮ್ಮದ್ ಕಿಜಾರ್, ಅಮ್ರಾನ್, ರಿಯಾಜ್, ಅಜಾನ್, ಮಹಮ್ಮದ್ ಮನ್ನಸೂರು, ಮಾಜುಲ್ಲಾ, ಸಮೀಉಲ್ಲಾ, ಜುನೇದ್, ಸಮೀರ್, ನೌಸತ್ ಹಾಗೂ ನಾಸೀರ್ ಷರೀಫ್ ಗಾಯಗೊಂಡಿದ್ದಾರೆ.
ರಾಜಕೀಯ ಕಾರಣಗಳಿಂದ ಗುಂಪುಗಳ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿದ್ದು, ಮಂಗಳವಾರ ಈದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯ ನಂತರ ನಡೆದ ಮೆರವಣಿಗೆ ಸಂದರ್ಭದಲ್ಲಿ ಎರಡೂ ಕಡೆಯವರಿಗೂ ಬಡಿದಾಟವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದಾವಿಸಿ ಲಾಠಿ ಪ್ರಹಾರ ನಡೆಸಿದ್ದಾರೆ. ಗಾಯಗೊಂಡ ಎರಡೂ ಗುಂಪಿನವರೂ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಘರ್ಷಣೆಯನ್ನು ಖಂಡಿಸಿ ಗುಂಪುಗಳು ಆಸ್ಪತ್ರೆ ಮುಂದೆ ಪ್ರತಿಭಟನೆಗೆ ಮುಂದಾದವು. ಪ್ರತಿಭಟನೆ ನಡೆಸಬೇಡಿ, ದೂರು ಕೊಡಿ ಎಂದು ಸಬ್ ಇನ್ಸ್‌ಪೆಕ್ಟರ್ ಚೇತನ್ ಅವರು ಮನವೊಲಿಸಿದರು. ಪೊಲೀಸರು ಮುಸ್ಲಿಂ ಬಡಾವಣೆಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಗಲಭೆ | AIMIM ಕಾರ್ಪೊರೇಟರ್ ಪತಿ ಸೇರಿ 85 ಜನರ ಬಂಧನ: ಪೂರ್ವನಿಯೋಜಿತ ಶಂಕೆ