ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಏಸ್ ಚಾಲಕ ಸಿದ್ದರಾಜು (34) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗೇಟ್ ಬಳಿ ಈ ಅಪಘಾತ (Road Accident ) ನಡೆದಿದೆ.
ಹಂಗಳ ಗ್ರಾಮದ 7-8 ಮಂದಿ ಟಾಟಾ ಏಸ್ ವಾಹನದಲ್ಲಿ ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಕೆಎಸ್ಆರ್‌ಟಿಸಿ ಬಸ್ ತೆರಳುತ್ತಿತ್ತು. ವೇಗವಾಗಿ ಬಂದ ಟಾಟಾ ಏಸ್ ಬಸ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಟಾಟಾ ಏಸ್ ಮುಂಭಾಗ ಛಿದ್ರ ಛಿದ್ರಗೊಂಡಿದೆ. ಚಾಲಕ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟರೆ, ಏಳು ಮಂದಿಗೆ ಗಾಯಗೊಂಡಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರ ಗಾಯಗೊಂಡಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವು ದಾಖಲಾಗಿದೆ.
ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಪಲ್ಟಿ ಹೊಡೆದ ಬಸ್; ಹೊತ್ತಿ ಉರಿದ ಸ್ಕೂಟರ್
ವಿಜಯಪುರ/ಬೆಂಗಳೂರು: ಅಡ್ಡ ಬಂದ ಬೈಕ್ ಸವಾರನ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಪಲ್ಟಿ (Bus Accident) ಹೊಡೆದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಕ್ರಾಸ್ ಬಳಿ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದರಿಂದ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ಬಸ್‌ವೊಳಗೆ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಬಸ್ ಜಮಖಂಡಿಯಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊತ್ತಿ ಉರಿದ ಸ್ಕೂಟರ್
ಚಲಿಸುತ್ತಿದ್ದ ಬೈಕ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಎಲೆಕ್ಟ್ರಾನಿಕ್ ಸಿಟಿ ಸಮೀಪ ಈ ಘಟನೆ ನಡೆದಿದೆ. ಚಲಿಸುತ್ತಿರುವಾಗಲೇ ಏಕಾಏಕಿ ಹೊಗೆ ಬಂದಿದೆ. ಇದನ್ನೂ ಗಮನಿಸಿದ ಸವಾರ ಕೂಡಲೇ ರಸ್ತೆ ಬದಿಗೆ ಸ್ಕೂಟರ್ ನಿಲ್ಲಿಸಿದ್ದಾನೆ. ಬಳಿಕ ಕ್ಷಣ ಮಾತ್ರದಲ್ಲಿ ಬೆಂಕಿ ಕಾಣಿಸಿಕೋಂಡು ಸುಟ್ಟು ಕರಕಲಾಗಿದೆ.
ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ, ಬೆಂಕಿಯನ್ನು ನಂದಿಸಿದ್ದಾರೆ.
ಭಯಾನಕ ಅಪಘಾತ; MBBS ವಿದ್ಯಾರ್ಥಿ ಸಹಿತ ಇಬ್ಬರು ಸಾವು
ಧಾರವಾಡ/ಮಾಗಡಿ: ಧಾರವಾಡ ಮತ್ತು ಮಾಗಡಿಗಳಲ್ಲಿ ಸಂಭವಿಸಿದ ಅವಳಿ ಅಪಘಾತಗಳಲ್ಲಿ (Road Accident) ಎಂಬಿಬಿಎಸ್ ವಿದ್ಯಾರ್ಥಿ (Medical Student) ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡದಲ್ಲಿ ಕಾರು ಪಲ್ಟಿಯಾದರೆ, ಮಾಗಡಿಯಲ್ಲಿ ಬೈಕ್‌ಗಳು ಡಿಕ್ಕಿ ಹೊಡೆದುಕೊಂಡಿವೆ.
ಧಾರವಾಡ ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಬಳಿ ಕಾರೊಂದು ಪಲ್ಟಿಯಾಗಿ ವೈದ್ಯಕೀಯ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. ದೀಪಕ್ (30) ಮೃತ ವೈದ್ಯಕೀಯ ವಿದ್ಯಾರ್ಥಿ.
ಮುಮ್ಮಿಗಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ತಿರುವು ಕೊಡಲಾಗಿತ್ತು. ಆದರೆ, ತಿರುವು ನೀಡಿದ್ದು ಗೊತ್ತಾಗದೆ ಕಾರು ಹಿಂದಿನ ರಸ್ತೆಯಲ್ಲೇ ಚಲಿಸಿ ಪಲ್ಟಿಯಾಗಿದೆ. ಅಡ್ಡಾದಿಡ್ಡಿ ಚಲಿಸಿದ ಕಾರನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ ವೇಳೆ ರಸ್ತೆಯ ಅಂಚಿಗೆ ಸಿಲುಕಿ ಪಲ್ಟಿಯಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿ ದೀಪಕ್ (30) ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಧಾರವಾಡ ಎಸ್ ಡಿ ಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತಿದ್ದ ದೀಪಕ್ ಮೂಲತಃ ಯಾದಗಿರಿ ಜಿಲ್ಲೆಯವರು. ಕಾರಿನಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ವಿನಯ ಎಂಬವರಿಗೆ ಸಹ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ