Site icon Vistara News

Tiger Attack : ಯುವಕನ ಮೇಲೆ ಹುಲಿ ದಾಳಿ; ಬಾಳೆ ತೋಟದಲ್ಲಿ ವ್ಯಾಘ್ರನ ಕಣ್ಣಾ ಮುಚ್ಚಾಲೆ

Tiger Attack

ಚಾಮರಾಜನಗರ: ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ (Tiger Attack) ಮಾಡಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನು (22) ಹುಲಿ ದಾಳಿಯಿಂದ ಬಚಾವ್‌ ಆದವನು.

ಗ್ರಾಮದ ರೈತ ವೃಷಬೇಂದ್ರಪ್ಪ ಎಂಬುವವರ ಬಾಳೆ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಬಾಳೆ ತೋಟದಿಂದ ತಪ್ಪಿಸಿಕೊಂಡು ಓಡುತ್ತಿದ್ದ ಹುಲಿಯು ಮನು ಮೇಲೆ ದಾಳಿ ಮಾಡಿದೆ. ಮನು ತಲೆ ಹಾಗೂ ಎಡಗೈಗೆ ತೀವ್ರವಾದ ಗಾಯವಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಯುವಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹುಲಿ ದಾಳಿ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲೇ ಬಂಡೀಪುರ ಅರಣ್ಯಾಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಹುಲಿ ಸೆರೆ ಹಿಡಿಯಲು ತಂಡವನ್ನು ರಚಿಸಿದ್ದಾರೆ.

ಇದನ್ನೂ ಓದಿ: Lovers Death : ನೇಣಿಗೆ ಕೊರಳೊಡ್ಡಿ ಪ್ರೇಮಿ ಜತೆ ಸಾವಿನಲ್ಲಿ ಒಂದಾದಳು ನವವಿವಾಹಿತೆ

ಮಕ್ಕಳು ಆಟವಾಡುವಾಗ ಓಡೋಡಿ ಬಂದ ಕರಡಿ!

ಗದಗ: ಜನನಿಬೀಡ ಪ್ರದೇಶದಲ್ಲಿ ಕರಡಿಯೊಂದು (bear attack) ಪ್ರತ್ಯಕ್ಷವಾಗಿದೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಘಟನೆ ನಡೆದಿದೆ. ಪಟ್ಟಣದ ಕಡ್ಲಿಪೇಟೆ ಓಣಿ ಸೇರಿದಂತೆ, ಈದ್ಗಾ ಮೈದಾನದ ಬಳಿ ಕರಡಿ (Wild Animals Attack) ಕಾಣಿಸಿಕೊಂಡಿದೆ. ಕಳೆದ‌ ನಾಲ್ಕು ದಿನಗಳಿಂದ ಕರಡಿ ಕಾಣಿಸಿಕೊಳ್ಳುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಸ್ತೆಯಲ್ಲಿ ಚಿಕ್ಕ ಮಕ್ಕಳು ಆಟ ಆಡುತ್ತಿರುವಾಗ ಕರಡಿಯೊಂದು ಹಾದು ಹೋಗಿದೆ. ಕರಡಿ ಕಂಡೊಡನೆ ಮಕ್ಕಳು ಚೀರಾಡುತ್ತಾ ಓಡಲು ನೋಡಿದ್ದಾರೆ. ಈ ವೇಳೆ ಕರಡಿ ಬೇರೊಂದು ರಸ್ತೆಗೆ ಓಡಿ ಹೋಗಿದೆ. ಅದೃಷ್ಟವಶಾತ್‌ ಯಾರ ಮೇಲೂ ದಾಳಿ ಮಾಡಿಲ್ಲ. ಸ್ಥಳೀಯ ನಿವಾಸಿಗಳು ಆತಂಕದಲ್ಲಿ ದಿನಕಳೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಕರಡಿ‌ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಜಾನುವಾರುಗಳನ್ನು ತಿಂದು ಹಾಕಿದ ತೋಳಗಳು

ಕಲಬುರಗಿ: ಕಲಬುರಗಿ ಆಳಂದ ತಾಲೂಕಿನ ಮದಗುಣಕಿ‌ ಗ್ರಾಮದಲ್ಲಿ ತೋಳಗಳು ಕಾಣಿಸಿಕೊಂಡಿವೆ. ಕೊಟ್ಟಿಗೆಯಲ್ಲಿ ಕಟ್ಟಿರುವ ಜಾನುವಾರುಗಳ ಮೇಲೆ ತೋಳಗಳು ದಾಳಿ‌ ನಡೆಸಿವೆ. ಕೆಲ ದಿನಗಳ ಹಿಂದೆ ಜಾನುವಾರುಗಳನ್ನು‌ ತಿಂದು ಹಾಕಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಎರಡು ತೋಳಗಳ ಪತ್ತೆಗೆ ಬೋನು ಹಾಗೂ ಸಿಸಿ‌ ಕ್ಯಾಮೆರಾವನ್ನು ಅಳವಡಿಕೆ ಮಾಡಿದ್ದರು. ಇದೀಗ ತೋಳಗಳ ಸಂಚಾರದ ಚಲನವಲನ ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ.

ಪೊನ್ನಂಪೇಟೆ ಗ್ರಾಮದಲ್ಲಿ ಅವಿತಿದೆ ಹುಲಿ, ಗ್ರಾಮಸ್ಥರಿಗೆ ಆತಂಕ

ಪೊನ್ನಂಪೇಟೆ (ಮಡಿಕೇರಿ) : ಆಹಾರ ಅರಸಿಕೊಂಡು ಬಂದ ಹುಲಿಯೊಂದು ಇಲ್ಲಿನ ಹರಿಹರ ಗ್ರಾಮದಲ್ಲಿ ಬೀಡುಬಿಟ್ಟಿದ್ದು ಗ್ರಾಮಸ್ಥರು ಭಯದಿಂದ ಜೀವನ ಮಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ರಾತ್ರಿ ವೇಳೆ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಹುಲಿ ಹರಿಹರ ಗ್ರಾಮದ ಸುಬ್ರಹ್ಮಣ್ಯ ದೇಗುದಲ್ಲಿ ಬೀಡುಬಿಟ್ಟಿದೆ. ಮಾಹಿತಿ ತಿಳಿದಾಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಮೂಲಕ ಹುಲಿಯ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹುಲಿ ರಾತ್ರಿಯೆಲ್ಲಾ ದೇವಾಲಯದ ಕೆರೆ ಬಳಿ ಮಲಗಿತ್ತು ಎಂದು ಹೇಳಲಾಗಿದೆ. ಹುಲಿಯ ಪುರ ಪ್ರವೇಶದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಹುಲಿ ‌ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿ‌ದ ಸಾಕಾನೆ ಭೀಮ

ಕೊಡಗು: ಹುಲಿ‌ ಸೆರೆ (Tiger attack) ಕಾರ್ಯಾಚರಣೆ ಮಾಡುತ್ತಿದ್ದ ತಂಡದ‌ ಮೇಲೆ‌ ಹೆಜ್ಜೇನು ದಾಳಿ (Honeybee Attack) ಮಾಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಘಟನೆ ನಡೆದಿದೆ. ಅರಣ್ಯಾಧಿಕಾರಿ ಕನ್ನಂಡ‌ ರಂಜನ್, ಮಾವುತ ಕುಳ್ಳ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭೀಮ ಹೆಸರಿನ ಆನೆ ಮೇಲೆ‌ ಜೇನು ಹುಳುಗಳು ಎರಗಿದೆ.

ಹರಿಹರ ಗ್ರಾಮದಲ್ಲಿ ನಿನ್ನೆ ಬುಧವಾರ ಹುಲಿಯೊಂದು ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು. ಹುಲಿ‌ಸೆರೆಗೆ ಗುರುವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಸಾಕು ಆನೆ ಜತೆಗೆ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಗೆ ಬೆದರಿ ಆನೆ ಭೀಮ ಓಡಿ‌ದೆ.

ಸದ್ಯ ಅಸ್ವಸ್ಥ ಅರಣ್ಯಾಧಿಕಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version