ಬೆಂಗಳೂರ: ಚಾಮರಾಜಪೇಟೆ ಸ್ವಯಂಪ್ರೇರಿತ ಬಂದ್ (Chamarajpet Bandh) ಕರೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆಯ ನೀಡಿರುವ ಬಂದ್ ಕರೆಗೆ ಮಂಗಳವಾರ (ಜು.12) ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ಸಿಕ್ಕಂತಿದೆ. ಪ್ರದೇಶದ ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚಿವೆ. ತರಕಾರಿ, ಮೆಡಿಕಲ್ ಶಾಪ್ ಎಂದಿನಂತೆ ತೆರೆದಿವೆ. ಅಲ್ಲಲ್ಲಿ ಆಟೋ ವಾಹನ ಸಂಚಾರ ನಡೆಯುತ್ತಿದ್ದು, ಕೆಲ ಖಾಸಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪೊಲೀಸ್ ಸಿಬ್ಬಂದಿ ನಿಯೋಜನೆ
ಚಾಮರಾಜಪೇಟೆಯಾದ್ಯಂತ ಒಟ್ಟು 8 ಸೆಕ್ಟರ್ ಹಾಗೂ 15 ಜಂಕ್ಷನ್‌ಗಳಾಗಿ ಪೊಲೀಸರು ವಿಂಗಡಿಸಲಾಗಿದೆ. ಪ್ರತಿ ಸೆಕ್ಟರ್‌ಗಳಿಗೆ ಇನ್ಸ್‌ಪೆಕ್ಟರ್ ಉಸ್ತುವಾರಿ, ಪ್ರತಿ ಜಂಕ್ಷನ್‌ನಲ್ಲಿ ಪಿಎಸ್ಐ ಸೇರಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಹೊಯ್ಸಳ ವಾಹನಗಳ ರೌಂಡ್ಸ್ ಮತ್ತು ಮಫ್ತಿಯಲ್ಲಿಯೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನ ಉಳಿಸಿಕೊಳ್ಳಲು ಇಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆ ತನಕ ಬಂದ್
ಬಂದ್ ಹಿನ್ನೆಲೆಯಲ್ಲಿ ನಾಗರಿಕ ಒಕ್ಕೂಟ ವೇದಿಕೆಯ ಕಾರ್ಯದರ್ಶಿ ರುಕ್ಮಾಂಗದ ಮಾತನಾಡಿ, ʻಮಂಗಳವಾರ ಕರೆ ನೀಡಿರುವ ಬಂದ್‌ಗೆ (ಜು.12) ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕೆಲ ಹೊತ್ತಿನ ನಂತರ ಹಾಲಿನ ಅಂಗಡಿಗಳನ್ನು ಮುಚ್ಚುವುದಾಗಿ ಹೇಳಿದ್ದಾರೆ. ಚಾಮರಾಜಪೇಟೆಯ ವರ್ತಕರು ಈಗಾಗಲೇ ಬಂದ್ ಮಾಡಿದ್ದಾರೆ. ಆಟೋ ಸಂಘಕ್ಕೂ ಮನವಿ ಮಾಡಿಕೊಂಡಿದ್ದೇವೆ. ಖಾಸಗಿ ಶಾಲೆಗಳವರು ರಜೆ ಘೋಷಿಸಿದ್ದಾರೆ. ನಾವು ಯಾವುದೇ ಪ್ರತಿಭಟನೆ ಮಾಡುವುದಿಲ್ಲ. ಜನರೇ ಸ್ವಯಂಪ್ರೇರಿತ ಬಂದ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇನ್ನೆರಡು ದಿನದ ನಂತರ ಬೈಕ್ ರ್‍ಯಾಲಿ ಮಾಡಲಿದ್ದೇವೆʼ ಎಂದು ಹೇಳಿಕೆ ನೀಡಿದ್ದಾರೆ.
ಜಮೀರ್ ಕಚೇರಿ ಪಕ್ಕದಲ್ಲಿ ಜಮಾವಣೆ
ಚಾಮರಾಜಪೇಟೆ ಶಾಸಕ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಕಚೇರಿ ಪಕ್ಕದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಅಧ್ಯಕ್ಷ ರಾಮೇಗೌಡ ಸೇರಿದಂತೆ ಎಲ್ಲರನ್ನೂ ಪೊಲೀಸರು ಸ್ಥಳದಿಂದ ಕಳುಹಿಸಿದ್ದಾರೆ.
ಜ್ಯೂಸ್ ಸೆಂಟರ್ ಮುಚ್ಚುವಂತೆ ಹಿಂದೂಪರ ಸಂಘಟನೆ ಒತ್ತಾಯ
ಜಮೀರ್ ಅಹ್ಮದ್ ಖಾನ್ ಅವರ ಕಚೇರಿ ಪಕ್ಕದಲ್ಲಿ ಇರುವ ಜ್ಯೂಸ್ ಸೆಂಟರ್ ಮುಚ್ಚುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಒತ್ತಾಯ ಮಾಡಿದರು. ಹೋರಾಟಕ್ಕೆ ಬೆಂಬಲವಿಲ್ಲ ಎಂದ ಮಾಲೀಕ, ಅಂಗಡಿ ಮುಚ್ಚುವುದಿಲ್ಲ ಎಂದು ಹೇಳಿದ್ದಕ್ಕೆ ಸಂಘಟನೆಯ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿದೆ. ನಂತರ ತೆರಳಿದ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಸದಸ್ಯರು ಜ್ಯೂಸ್ ಅಂಗಡಿ ಮುಚ್ಚಿಸಿದ್ದಾರೆ. ʻಬಲವಂತದಿಂದ ಬಂದ್ ಮಾಡಿಸುತ್ತಿದ್ದಾರೆ. ಸುಖಾಸುಮ್ಮನೆ ಕಿಡಿಗೇಡಿಗಳು ಬಂದ್ ಮಾಡಿಸಿದ್ದಾರೆ. ಬೆದರಿಕೆ ಒಡ್ಡುತ್ತಿದ್ದಾರೆʼ ಎಂದು ಜಮೀರ್ ಆಪ್ತ ಗೌಸ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನ ವಿವಾದ: ಜುಲೈ 12ರ ಬಂದ್‌ಗೆ ʻಬೆಂಬಲʼ ಸೂಚಿಸಿ ಪೋಸ್ಟರ್