Site icon Vistara News

7th pay commission: ಮಾ.1ರಿಂದ ರಾಜ್ಯಾದ್ಯಂತ ಶಿಕ್ಷಕರ ಮುಷ್ಕರ: ಚಂದ್ರಶೇಖರ್‌ ನುಗ್ಗಲಿ

Chandrashekar Nugli says Teachers to go on strike across the state from March 1

#image_title

ಬೆಂಗಳೂರು: ಏಳನೇ ವೇತನ ಆಯೋಗದ (7th pay commission) ವರದಿ ಜಾರಿಗೆ ಆಗ್ರಹಿಸಿ ಮಾ.1ರಿಂದ ಶಾಲೆಗಳಿಗೆ ಗೈರು ಹಾಜರಾಗಿ ತೀವ್ರ ಪ್ರತಿಭಟನೆಗೆ ಇಳಿಯುವುದಾಗಿ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ನುಗ್ಗಲಿ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ವಿಸ್ತಾರ ನ್ಯೂಸ್‌ ಜತೆ ಮಾತನಾಡಿರುವ ಅವರು, ಸರ್ಕಾರಿ ನೌಕರರು, ಶಿಕ್ಷಕರು ಸೇರಿದಂತೆ ನಾನಾ ಇಲಾಖೆಗಳ ಸಿಬ್ಬಂದಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಏಳನೇ ವೇತನ ಆಯೋಗ ಕುರಿತ ಮಧ್ಯಂತರ ವರದಿ ಜಾರಿ ಮಾಡಬೇಕು ಮತ್ತು ಎನ್‌ಪಿಎಸ್‌ ಪದ್ಧತಿ ರದ್ದುಪಡಿಸಬೇಕು ಎನ್ನುವುದು ನಮ್ಮ ಮುಖ್ಯ ಬೇಡಿಕೆಗಳಾಗಿವೆ ಎಂದು ವಿವರಿಸಿದರು.

ನಾವು 2017ರಿಂದ ಆರನೇ ವೇತನ ಆಯೋಗದ ಸೌಲಭ್ಯ ಪಡೆಯುತ್ತಿದ್ದೇವೆ. ಆದರೆ ಅದು ಈಗ 5 ವರ್ಷ ಪೂರ್ಣಗೊಂಡಿದೆ. ರಾಜ್ಯ ಸರ್ಕಾರ ಸುಧಾಕರ್‌ ರಾವ್‌ ಸಮಿತಿ ರಚಿಸಿ ಮೂರು ತಿಂಗಳು ಕಳೆದಿವೆ. ಅದು ಕೇಳಿದ ಪ್ರಶ್ನಾವಳಿಗಳಿಗೆ ನಾವು ಆಗಲೇ ಉತ್ತರಿಸಿದ್ದೇವೆ. ಆದರೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ನಮಗೆ ನಿರಾಸೆಯನ್ನುಂಟು ಮಾಡಿದ್ದಾರೆ ಎಂದು ನುಗ್ಗಲಿ ಹೇಳಿದ್ದಾರೆ.

ಇದನ್ನೂ ಓದಿ | 7th Pay commission : ಸಿಎಂ ಬೊಮ್ಮಾಯಿ ಭರವಸೆ ಅಸ್ಪಷ್ಟ, ಸರ್ಕಾರಿ ನೌಕರರ ಮುಷ್ಕರ ನಿರ್ಧಾರ ವಾಪಸ್ ಇಲ್ಲ: ಷಡಾಕ್ಷರಿ

ಆರನೇ ವೇತನ ಆಯೋಗದ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ ಆದಷ್ಟು ಬೇಗ ಸೌಲಭ್ಯ ಕಲ್ಪಿಸಬೇಕು. ಹಾಗೆಯೇ ಎನ್‌ಪಿಎಸ್‌ ವ್ಯವಸ್ಥೆ ರದ್ದುಪಡಿಸಬೇಕು. ಈ ಬಗ್ಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಾವು 16 ದಿನ ನಿರಂತರ ಹೋರಾಟ ಮಾಡಿದ್ದೆವು. ಆ ಸಂದರ್ಭದಲ್ಲಿ ಸಚಿವ ಡಾ. ಸುಧಾಕರ್‌ ಅವರು ಭರವಸೆ ನೀಡಿದ ಬಳಿಕ ಮುಷ್ಕರ ಹಿಂತೆಗೆದುಕೊಂಡಿದ್ದೆವು. ಆದರೆ ಸರ್ಕಾರ ಈವರೆಗೆ ಈ ಕುರಿತ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಚಂದ್ರಶೇಖರ್‌ ನುಗ್ಗಲಿ ಆಪಾದಿಸಿದ್ದಾರೆ.

ಹಿಮಾಚಲ ಪ್ರದೇಶ, ಪಂಜಾಬ್‌ ಇತ್ಯಾದಿ ರಾಜ್ಯಗಳ ಮಾದರಿಯಲ್ಲಿ ಎನ್‌ಪಿಎಸ್‌ ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿ ಜಾರಿ ಮಾಡಬೇಕು ಎಂದು ಆಗ್ರಹಿಸಿರುವ ಅವರು, ರಾಜ್ಯದ 5.5 ಲಕ್ಷ ಸರ್ಕಾರಿ ನೌಕರರು ಮಾ.1ರಿಂದ ಮುಷ್ಕರಕ್ಕೆ ಇಳಿಯಲಿದ್ದಾರೆ. ಮುಖ್ಯವಾಗಿ 1.5 ಲಕ್ಷ ಪ್ರಾಥಮಿಕ ಶಾಲೆ ಶಿಕ್ಷಕರು ತರಗತಿಗೆ ಹೋಗದೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದ್ದಾರೆ.

Exit mobile version