ಬೆಂಗಳೂರು: ಭಾರತದ ಚಂದ್ರಯಾನ 3 (Chandrayaan 3) ತಲುಪಿದ ಜಾಗವನ್ನು ಇನ್ನು ಮುಂದೆ ಭಾರತದ ಸಾಧನೆಯ ದ್ಯೋತಕವಾಗಿ ʼಶಿವಶಕ್ತಿ ಪಾಯಿಂಟ್ʼ (Shivashakthi point) ಎಂದು ಕರೆಯಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಘೋಷಿಸಿದ್ದಾರೆ. ಚಂದ್ರಯಾನ 3 ಚಂದ್ರನಲ್ಲಿ ವಿಜಯಧ್ವಜ ಊರಿದ ದಿನವಾದ ಆಗಸ್ಟ್ 23ನ್ನು ʼಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ದಿನ (ಹಿಂದೂಸ್ತಾನ್ ನ್ಯಾಷನಲ್ ಸ್ಪೇಸ್ ಡೇ- Hindustan national space day) ಎಂದು ಕರೆಯಲಾಗುವುದು ಎಂದೂ ಅವರು ಘೋಷಿಸಿದರು.
ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ (ISRO) ಕಮಾಂಡ್ ಪಾಯಿಂಟ್ ಪೀಣ್ಯದ ಇಸ್ಟಾಕ್‌ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳನ್ನು ಶಿವ ಮತ್ತು ಶಕ್ತಿಗೆ ಹೋಲಿಸಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಬಲದಿಂದ ಈ ಸಾಧನೆ ಸಾಧ್ಯವಾಗಿದೆ. ವಿಕ್ರಮ್‌ನ ವಿಶ್ವಾಸದ ಜತೆಗೆ ಪ್ರಗ್ಯಾನ್‌ನ ಪರಾಕ್ರಮ ಇದೆ. ಹೀಗಾಗಿ ವಿಕ್ರಮ್ ಲ್ಯಾಂಡರ್ ಇಳಿದ ಜಾಗವನ್ನು ಶಿವಶಕ್ತಿ ಪಾಯಿಂಟ್ ಎಂದು ಕರೆಯೋಣ ಎಂದರು. ಹಾಗೆಯೇ ಚಂದ್ರಯಾನ 3 ಚಂದ್ರನಲ್ಲಿ ವಿಜಯಧ್ವಜ ಊರಿದ ದಿನವಾದ ಆಗಸ್ಟ್ 23ನ್ನು ಪ್ರತಿವರ್ಷವೂ ಸಂಭ್ರಮಿಸಲು ʼಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ದಿನ (ಹಿಂದೂಸ್ತಾನ್ ನ್ಯಾಷನಲ್ ಸ್ಪೇಸ್ ಡೇ) ಎಂದು ಕರೆಯೋಣ ಎಂದರು.
ಇಂದು ನಮ್ಮ ಮನೆಮನೆಯಲ್ಲೂ ತ್ರಿವರ್ಣ ಧ್ವಜ (ತಿರಂಗಾ) ಇದೆ. ಹಾಗೆ ಚಂದ್ರನಲ್ಲೂ ತಿರಂಗಾ ನೆಟ್ಟಿದ್ದೇವೆ. ಕಳೆದ ಬಾರಿ ನಾವು ನಡೆಸಿದ ಚಂದ್ರಯಾನ 2 ಕೂಡ ಚಂದ್ರನಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿದೆ. ಈ ಸ್ಥಳವನ್ನು ʼತಿರಂಗಾ ಪಾಯಿಂಟ್ʼ ಕರೆಯಲಾಗುವುದು. ಇದು ಭಾರತದ ಪ್ರತಿಯೊಂದು ಸಾಹಸಕ್ಕೆ ಪ್ರೇರಣೆಯಾಗಿದೆ. ಯಾವ ವಿಫಲತೆಯೂ ಕೊನೆಯದಲ್ಲ ಎಂದು ನಮಗೆ ಕಲಿಸುತ್ತದೆ. ದೃಢ ಇಚ್ಛಾಶಕ್ತಿಯಿದ್ದರೆ ಸಫಲತೆ ದೊರೆಯುತ್ತದೆ ಎಂದು ಕಲಿಸಿದೆ ಎಂದರು.
ಮಾತು ಆರಂಭಿಸುವ ಮುನ್ನ ಪ್ರಧಾನಿ ಮೋದಿ ಒಂದು ಕ್ಷಣ ಭಾವುಕರಾದರು. ʼʼನಾನು ಇಂದು ಮಾತು ಕಳೆದುಕೊಂಡಿದ್ದೇನೆ. ನಾನು ದಕ್ಷಿಣ ಆಫ್ರಿಕದಲ್ಲಿದ್ದರೂ ನನ್ನ ಮನಸ್ಸು ನಿಮ್ಮ ಜೊತೆಗೇ ಇತ್ತು. ನಿಮ್ಮ ಪರಿಶ್ರಮ, ಧೈರ್ಯ, ಸಾಧನೆಗೆ ನನ್ನ ಸೆಲ್ಯೂಟ್. ಇದು ಭಾರತದ ವೈಜ್ಞಾನಿಕ ಸಾಮರ್ಥ್ಯದ ಶಂಖನಾದ. ಇಂಡಿಯಾ ಈಸ್ ಆನ್ ದಿ ಮೂನ್ʼʼ ಎಂದು ಅವರು ಘೋಷಿಸಿದರು.
ನಮ್ಮ ದೇಶದ ಹೆಮ್ಮೆಯನ್ನು ನಾವು ಚಂದ್ರನಲ್ಲಿ ಸ್ಥಾಪಿಸಿದ್ದೇವೆ. ನಾವು ತಲುಪಿದ ತಾಣಕ್ಕೆ ಇದುವರೆಗೂ ಇನ್ಯಾರೂ ತಲುಪಿಲ್ಲ. ನಾವು ಏನು ಮಾಡಿದ್ದೆವೋ ಅದನ್ನು ಹಿಂದೆ ಯಾರೂ ಮಾಡಿಲ್ಲ. ಇದು ಇಂದಿನ ಭಾರತ.
ಇದು ನಿರ್ಭೀತ, ಹೆಮ್ಮೆಯ ಭಾರತ. ಇಂಥ ಸಾಧನೆಯಿಂದ ಮನುಷ್ಯ ಅಮರನಾಗುತ್ತಾನೆ. ಇದರಿಂದ ನಾವು ಅಮರರಾದೆವು. ಇದು ಮನುಕುಲದ ಪ್ರೇರಣಾದಾಯಕ ಕ್ಷಣಗಳಲ್ಲಿ ಒಂದು. ಇದನ್ನು ಯಾರಿಗೆ ತಾನೇ ಮರೆಯಲು ಸಾಧ್ಯ? ಎಂದು ಪ್ರಶ್ನಸಿದರು.
ಬಾಹ್ಯಾಕಾಶ ವಲಯದಲ್ಲಿ ಭಾರತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಭಾರತದ ಆರ್ಥಿಕ ಶಕ್ತಿಯಲ್ಲಿ ಈ ಕ್ಷೇತ್ರದ ಕೊಡುಗೆ ಮಹತ್ವದ್ದು. ನಮ್ಮ ಯುವಶಕ್ತಿ ಇದನ್ನು ಹೊಸ ಅವಕಾಶವಾಗಿ ಸ್ವೀಕರಿಸುವ ಅಗತ್ಯ ಇದೆ. ನಮ್ಮ ಬಾಹ್ಯಾಕಾಶ ಸಾಧನಗಳು ನಮ್ಮ ಬದುಕನ್ನು ಸುಗಮಗೊಳಿಸಿವೆ. ಇದೆಲ್ಲವೂ ನಿಮ್ಮ ಪರಿಶ್ರಮದಿಂದ ಸಾಧ್ಯವಾಗಿದೆ ಎಂದು ವಿಜ್ಞಾನಿಗಳನ್ನು ಶ್ಲಾಘಿಸಿದರು.
ಭಾರತವನ್ನು ಮೂರನೇ ಜಗತ್ತಿನ ದೇಶ ಎಂದು ಕರೆಯಲಾಗುತ್ತಿತ್ತು. ಇಂದು ನಾವು ಮೊದಲ ಸಾಲಿಗೆ ಬಂದು ನಿಂತಿದ್ದೇವೆ. ಮೂರನೇ ಸಾಲಿನಿಂದ ಮೊದಲ ಸಾಲಿಗೆ ಬರಲು (ಥರ್ಡ್ ರೋ ಟೂ ಫಸ್ಟ್ ರೋ) ಇಸ್ರೋ ಕಾರಣವಾಗಿದೆ. ಇಸ್ರೋದಂಥ ಸಂಸ್ಥೆಯ ಕೊಡುಗೆ ಈ ಸಾಧನೆಯಲ್ಲಿ ಇದೆ. ನೀವು ನಮ್ಮ ಮೇಕ್ ಇನ್ ಇಂಡಿಯಾವನ್ನು ಚಂದ್ರನವರೆಗೆ ತಲುಪಿಸಿದ್ದೀರಿ ಎಂದು ಮೋದಿ ಶ್ಲಾಘಿಸಿದ್ದಾರೆ.
ಶಿವ- ಶಕ್ತಿಯಲ್ಲಿ ಶಕ್ತಿಯು ಪ್ರಮುಖವಾಗಿದೆ. ನಿರ್ಮಾಣದಿಂದ ಪ್ರಳಯದವರೆಗೆ ಎಲ್ಲವನ್ನೂ ಈಡೇರಿಸುವುದು ನಾರಿಶಕ್ತಿ. ಚಂದ್ರಯಾನದಲ್ಲಿ ಮಹಿಳಾ ವಿಜ್ಞಾನಿಗಳು ದೊಡ್ಡ ಭೂಮಿಕೆ ನಿರ್ವಹಿಸಿದ್ದಾರೆ. ಚಂದ್ರಮನ ಶಿವಶಕ್ತಿ ಪಾಯಿಂಟ್ ಭಾರತದ ನಾರಿಶಕ್ತಿಯ ಹಾಗೂ ದಾರ್ಶನಿಕ ಚಿಂತನೆಯ ನಿದರ್ಶನವಾಗಿರಲಿದೆ ಎಂದು ಅವರು ಶ್ಲಾಘಿಸಿದರು.
ನಾನು ನಿಮ್ಮ ಎಷ್ಟು ಗುಣಗಾನ ಮಾಡಿದರೂ ಕಡಿಮೆ. ಇದು ವಿಜ್ಞಾನದ ಪರಾಕ್ರಮದಂತೆಯೇ ಪ್ರಜ್ಞಾನದ ಪರಾಕ್ರಮ ಕೂಡ ಆಗಿದೆ. ನಮ್ಮ ಭಾರತದ ಚಿಹ್ನೆ ಅಲ್ಲಿ ಮೂಡಿದೆ. ಭೂಮಿಯ ಲಕ್ಷಾಂತರ ವರ್ಷಗಳ ಇತಿಹಾಸದಲ್ಲಿ ಅಮರವಾದ ಕ್ಷಣವನ್ನು ಭಾರತ ದಾಖಲಿಸಿದೆ. ಇದು ಪೂರ್ತಿ ಮಾನವತೆಯ ಸಫಲತೆ. ಇದರಿಂದ ಎಲ್ಲ ದೇಶಗಳಿಗೂ ಹೊಸ ರಸ್ತೆ ತೆರೆದಂತಾಗಿದೆ. ಇದು ಮನುಕುಲಕ್ಕೆ ಭಾರತ ನೀಡಿದ ಕೊಡುಗೆ ಎಂದರು.
ಇದನ್ನೂ ಓದಿ: Chandrayaan 3 : ಮಿಷನ್ ಚಂದ್ರಯಾನ 3 ಯಶಸ್ಸಿನಲ್ಲಿ ಒಂದೇ ಊರಿನ ಮೂವರು ವಿಜ್ಞಾನಿಗಳು ಭಾಗಿ!