ಬೆಂಗಳೂರು: ಭಾರತೀಯರ ಚಂದ್ರಯಾನದ ಕನಸು ನನಸಾಗಲು ಕ್ಷಣಗಣನೆ ಶುರುವಾಗಿದೆ. ಬಾಹ್ಯಾಕಾಶದ ಅಪರೂಪದ ಕ್ಷಣಕ್ಕೆ ಕಾದುಕುಳಿತಿರುವವರು ಇಸ್ರೋ ಚಂದ್ರಯಾನ 3 ಯಶಸ್ಸಿಗಾಗಿ ಪೂಜೆ-ಪುನಸ್ಕಾರದ ಮೊರೆ ಹೋಗಿದ್ದಾರೆ. ಬುಧವಾರ (ಆಗಸ್ಟ್ 23) ಸಂಜೆ 5.44ಕ್ಕೆ ಭಾರತದ ವಿಕ್ರಮ್ ಲ್ಯಾಂಡರ್ (Vikram Lander) ಚಂದ್ರನ ಅಂಗಳದಲ್ಲಿ ಚಂದ್ರಯಾನ 3 (Chandrayaana 3) ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಹೀಗಾಗಿ ಚಂದ್ರಯಾನ 3ಗೆ ವಿಘ್ನ ಬಾರದಿರಲಿ ಎಂದು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.
ಬೆಂಗಳೂರಿನ ಚಾಮರಾಪೇಟೆಯಲ್ಲಿರುವ ಕನ್ನಡ ತಿಂಡಿ ಕೇಂದ್ರದಲ್ಲಿ ರಥವೊಂದನ್ನು ಸಿದ್ಧ ಮಾಡಲಾಗಿದೆ. ರಥದೊಳಗೆ ತಾಯಿ ಭುವನೇಶ್ವರಿ ಫೋಟೊ ಹಾಗೂ ರಾಷ್ಟ್ರ ಧ್ವಜವನ್ನು ಇಟ್ಟು ಅಶ್ವಥ್ ನಾರಾಯಣ, ರಾಮಚಂದ್ರ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಂದ್ರಯಾನ 3 ರಾಕೆಟ್ ಭಾವಚಿತ್ರ ಹಿಡಿದು ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಬಳಿಕ ನಗರದ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರದ ಜತೆಗೆ ರಾಷ್ಟ್ರ ಧ್ವಜ ಹಿಡಿದು ಜೈಕಾರ ಕೂಗುತ್ತಾ ತಾಯಿ ಭಾರತ ಮಾತೆಯ ಫೋಟೋ ಅರ್ಚನೆ ಮಾಡಿಸಿದರು.
ಗವಿ ಗಂಗಾಧರೇಶ್ವರದಲ್ಲಿ ಹೋಮ-ಹವನ
ಚಾಮರಾಜಪೇಟೆಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆಯೊಂದಿಗೆ ಹೋಮ-ಹವನ ನಡೆಸಲಾಯಿತು. ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರ ನೇತೃತ್ವದಲ್ಲಿ ದೇಗುಲದ ಆವರಣದಲ್ಲಿ ಹೋಮ ನಡೆಯಿತು. ಇಡೀ ವಿಶ್ವವೇ ಗಮನಿಸುವ ಸನ್ನಿವೇಶ ಬಂದಿದೆ. ಚಂದ್ರನ ಮೇಲೆ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ನವಗ್ರಹಗಳ ಪೂಜೆ ಹಾಗೂ ಚಂದ್ರ ಹೋಮ ನಡೆದಿದೆ. ಯಾವುದೇ ಅಡೆತಡೆಗಳು ಬಾರದಂತೆ ನಿರ್ವಿಘ್ನವಾಗಿ ಚಂದ್ರಯಾನ ಯಶಸ್ಸು ಸಿಗಲಿ ಎಂದು ಆಶಿಸಿದರು.
ರಾಕೆಟ್ ಮಾಡೆಲ್‌ಗೆ ಪೂಜೆ
ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್‌ಗೆ ನಾಡಿನ ಎಲ್ಲೆಡೆ ಪ್ರಾರ್ಥನೆ ನಡೆಯುತ್ತಿದೆ. ನಗರದ ಪ್ರಮುಖ ದೇಗುಲಗಳಲ್ಲಿ ಚಂದ್ರಯಾನ ಯಶಸ್ಸು ಕಾಣಲು ವಿಶೇಷ ಪೂಜೆ ನಡೆಯುತ್ತಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಐತಿಹಾಸಿಕ ದೇಗುಲ ಬನಶಂಕರಿ ದೇವಸ್ಥಾನದಲ್ಲಿ ರಾಕೆಟ್ ಮಾಡೆಲ್ ಹಾಗೂ ಅಮ್ಮನರ ಹಿಂದೆ ರಾಷ್ಟ್ರಧ್ವಜ ಇಟ್ಟು ಅರ್ಚನೆ ಮಾಡಲಾಯಿತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ