ಬೆಂಗಳೂರು: ಮಾಸ್ಟರ್ ಆನಂದ್ (Master anadh) ಮಗಳ ಹೆಸರು ಬಳಸಿ ಜನರಿಗೆ ವಂಚನೆ (Fraud Case) ಮಾಡುತ್ತಿರುವ ಆರೋಪ ಎದುರಿಸುತ್ತಿರುವ ನಿಶಾ ನರಸಪ್ಪ (Nisha narasapa) ಜಾಲ ಬೆಳೆಯುತ್ತಲೇ ಇದೆ. ಎನ್ಎನ್ ಪ್ರೊಡಕ್ಷನ್ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಪ್ರಮೋಷನ್‌ಗಾಗಿ ಸೆಲೆಬ್ರಿಟಿಗಳನ್ನು ಸಂಪರ್ಕಿಸುವ ನಿಶಾ ಮಾತಲ್ಲೇ ಮರಳು ಮಾಡುತ್ತಿದ್ದರು. ಬಳಿಕ ಅದೇ ಸೆಲೆಬ್ರಿಟಿ ಹೆಸರು ಬಳಸಿಕೊಂಡು ಜನರಿಂದ ಲಕ್ಷ ಲಕ್ಷ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ಈಗ ಇದೇ ಜಾಲಕ್ಕೆ ಬಿಗ್ ಬಾಸ್ ಖ್ಯಾತಿಯ ಶಮಂತ್ ಅಲಿಯಾಸ್ ಬ್ರೋ ಗೌಡ (Bro Gowda) ಹೆಸರು ಕೂಡ ದುರುಪಯೋಗವಾಗಿದೆ.
ಬ್ರೋ ಗೌಡ ಶಮಂತ್ ಹೆಸರೇಳಿಕೊಂಡು ನಿಶಾ 4 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ರೋ ಗೌಡ ಶಮಂತ್, ಆಲ್ಬಂ ಸಾಂಗ್ ಶೂಟ್ ಮಾಡುವುದಾಗಿ ಹೇಳಿ ನಿಶಾ ಪರಿಚಯ ಮಾಡಿಕೊಂಡಿದ್ದರು. ಆದರೆ ನಾನಾ ಕಾರಣದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಈ ನಡುವೆ ನನ್ನ ಹೆಸರು ಹೇಳಿಕೊಂಡು ನಿಶಾ ಸ್ಕ್ಯಾಮ್ ಮಾಡುತ್ತಿದ್ದಾರೆ ಎಂದು ಇಮೇಲ್ ಬಂದಿತ್ತು. ಕೂಡಲೇ ಇದನ್ನೂ ನಿಶಾಳ ಗಮನಕ್ಕೆ ತಂದಿದ್ದೆ. ಆಗ ಆಕೆ ಇದು ನನ್ನ ವಿರೋಧಿ ಮಾಡುತ್ತಿರುವ ಪಿತೂರಿ ಎಂದು ಹೇಳಿದ್ದರು. ಹೀಗಾಗಿ ನಾನು ಸುಮ್ಮನಾಗಿದ್ದೆ, ಆದರೆ ಈಗ ಬರುತ್ತಿರುವ ಸುದ್ದಿ ನೋಡಿದರೆ ನಿಜಕ್ಕೂ ಶಾಕ್ ಆಗುತ್ತಿದೆ ಎಂದು ವಿಸ್ತಾರ ನ್ಯೂಸ್‌ನೊಂದಿಗೆ ಶಮಂತ್ ವಿವರಿಸಿದ್ದಾರೆ.
ಅವರ ಮಾತಿನ ರೀತಿ ಎಲ್ಲವೂ ಚೆನ್ನಾಗಿತ್ತು, ಹೀಗಾಗಿ ಪ್ರಮೋಷನ್‌ಗೆ ಒಪ್ಪಿಗೆ ನೀಡಿದೆ. ನಿಶಾ ನನ್ನ ಹೆಸರು ಮಾತ್ರವಲ್ಲ ಬೇರೆ ಸೆಲೆಬ್ರಿಟಿಗಳ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದು ತಿಳಿದುಬಂದಿದೆ. ಹಿಂದೆಲ್ಲ ಸಿನಿಮಾದಲ್ಲಿ ಚಾನ್ಸ್ ಕೊಡಿಸಲು ಬೇರೆ ಬೇರೆ ರೀತಿ ಸ್ಕ್ಯಾಮ್ ನಡಿತಿತ್ತು. ಈಗ ರೀತಿ ಹೊಸದಾಗಿ ನಡಿತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಿಶಾ ನನ್ನ ಹೆಸರಿನಲ್ಲಿ ಬರೀ 4 ಲಕ್ಷ ರೂ ಮಾತ್ರ ತೆಗೆದುಕೊಂಡಿದ್ದರಾ ಅಥವಾ ಅದಕ್ಕಿಂತ ಹೆಚ್ಚು ಹಣ ಪಡೆದುಕೊಂಡಿದ್ದರಾ ಎಂಬುದು ತಿಳಿಯಬೇಕಿದೆ. ಹೀಗಾಗಿ ಈ ಸಂಬಂಧ ನಾನು ಸಹ ಪೊಲೀಸರಿಗೆ ದೂರು ಕೊಡಲಿದ್ದೇನೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ವಂಶಿಕಾ ಅಂಜನಿ ಕಶ್ಯಪ ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿ ಎಲ್ಲರ ಮನ ಗೆಲುತ್ತಿರುವ ಪೋರಿ. ತಂದೆ ನಟ ಮಾಸ್ಟರ್ ಆನಂದ್‌ರಂತೆ (Master anadh) ಅರಳು ಹುರಿದಂತೆ ಮಾತನಾಡುವ ವಂಶಿಕಾ (Vanshika Anjani kashyapa) ಸೋಶಿಯಲ್ ಮೀಡಿಯಾದಲ್ಲೂ (Social Media) ಹೆಚ್ಚು ಸದ್ದು ಮಾಡುತ್ತಿದ್ದಾಳೆ. ಈ ಬಾಲನಟಿ ವಂಶಿಕಾ ಹೆಸರನ್ನು ದುರುಪಯೋಗ (Fraud Case) ಮಾಡಿಕೊಳ್ಳಲಾಗುತ್ತಿದೆ ಎಂದು ತಾಯಿ ಯಶಸ್ವಿನಿ ಜು.13ರಂದು ಠಾಣೆ ಮೆಟ್ಟಿಲೇರಿದ್ದರು.
ವಂಶಿಕಾ ಮಾಸ್ಟರ್ ಆನಂದ್ ಹೆಸರಿನಲ್ಲಿ (Vanshika Anjani kashyapa) ಹಣ ಪೀಕಿದ ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಒಂದೊಂದು ಹಳೇ ವಂಚನೆ ಕೇಸ್‌ಗಳು (Fraud Case) ಬೆಳಕಿಗೆ ಬರುತ್ತಿವೆ. ನಿಶಾ ನರಸಪ್ಪ (nisha narasapa) ವಿರುದ್ಧ ಇದೇ ಮೊದಲಲ್ಲ, ಈ ಹಿಂದೆಯೇ ವಂಚನೆ ಕೇಸ್ ದಾಖಲಾಗಿದೆ.
ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ತಾರಾ ಎಂಬುವರಿಗೆ 20 ಲಕ್ಷ ರೂ. ವಂಚನೆ ಮಾಡಿರುವ ಆರೋಪವು ಕೇಳಿ ಬಂದಿದೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ರೀತಿ ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲೂ ವಂಚನೆ ದೂರುಗಳು ದಾಖಲಾಗಿದೆ. ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್‌ನಲ್ಲಿ ಬರೋಬ್ಬರಿ 35 ಲಕ್ಷ ರೂ. ದೋಖಾ ಆಗಿದೆ.
ಲಾಭಾಂಶದ ನಶೆ ಎರಿಸುವ ನಿಶಾ
ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದರೆ ಲಾಭಾಂಶ ನೀಡುವುದಾಗಿ ಆಸೆ ತೋರಿ ನಿಶಾ ನರಸಪ್ಪ ಮೋಸ ಮಾಡಿರುವುದು ಕಂಡು ಬಂದಿದೆ. ಮೊದ ಮೊದಲು ಲಾಭಾಂಶದ ಹಣ ಕೊಟ್ಟು ಬಳಿಕ ಎರಡರಷ್ಟು ಹಣ ಪಡೆದಿದ್ದಾರೆ. ರಾಮನಗರ ಮೂಲದ ನಿಶಾ ನರಸಪ್ಪ, ಬೆಂಗಳೂರಿನ ದೊಡ್ಡ ಮಾಲ್‌ಗಳಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದರು. ಇದಲ್ಲದೆ ಬೆಂಗಳೂರು ಹೊರ ವಲಯದ ರೆಸಾರ್ಟ್‌ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಯಮಾರಿಸುತ್ತಿದ್ದರು ಎನ್ನಲಾಗಿದೆ.
ಸದ್ಯ ಸದಾಶಿವನಗರ ಠಾಣೆಗೆ ಹರಿದು ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಸೂಚನೆ ನೀಡಲಾಗಿದೆ. ಹೈಕೋರ್ಟ್‌ನಲ್ಲೂ ಓರ್ವ ಮಹಿಳೆ ಕೇಸ್ ಹಾಕಿದ್ದು, ವಿಚಾರಣೆ ಹಂತದಲ್ಲಿದೆ. ಲಕ್ಷಾಂತರ ಹಣದಲ್ಲಿ ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದ ನಿಶಾ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ