ಚಿಕ್ಕಮಗಳೂರು: ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಕೂಲಿ ಮಹಿಳೆಗೆ ಮೋಸ (Accused of Cheating) ಮಾಡಿರುವ ಆರೋಪ ಕೇಳಿಬಂದಿದೆ. ಶಾಸಕರ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಈ ಬಗ್ಗೆ ಯಾರಿಗೂ ತಿಳಿಸಬೇಡ, ಸರ್ಕಾರದ ಸೌಲಭ್ಯ ಕೊಡಿಸುತ್ತೇನೆ ಎಂದು ಹೇಳಿ ಶಾಸಕರು ಯಾವುದೇ ನೆರವು ನೀಡಿಲ್ಲ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ, ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಸಾಪುರ ಗ್ರಾಮದ ಶೋಭಾ ಎಂಬುವವರು ಸಂತ್ರಸ್ತ ಮಹಿಳೆಯಾಗಿದ್ದಾರೆ. ಜುಲೈನಲ್ಲಿ ಶಾಸಕರ ತೋಟದಲ್ಲಿ ಮರ ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, 4 ತಿಂಗಳ ಬಳಿಕ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ | Voter data | ವೋಟರ್ ಐಡಿ ಮಾತ್ರವಲ್ಲ ನಾಗರಿಕರ ಖಾಸಗಿ ಮಾಹಿತಿ ಲೂಟಿ ಆಗ್ತಿದೆ ಎಂದ ಪ್ರಿಯಾಂಕ್ ಖರ್ಗೆ
ಶಾಸಕ ಡಿ.ಟಿ.ರಾಜೇಗೌಡ ಮತ್ತು ಯುವರಾಜಗೌಡ (ಸಹ ಮಾಲೀಕ) ಅವರ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಗಾಯಗೊಂಡಿದ್ದೆ. ಆದರೆ ಈ ಬಗ್ಗೆ ಎಲ್ಲೂ ಬಹಿರಂಗಪಡಿಸಬಾರದು, ಬೇರೆ ಕಡೆ ಗಾಯಗೊಂಡಿರುವುದಾಗಿ ಪೊಲೀಸರ ಮುಂದೆ ಹೇಳಬೇಕು ಎಂದು ತಿಳಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಲಿಗೆ ಗಂಭೀರ ಗಾಯವಾಗಿದ್ದರಿಂದ ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ಹೇಳಿ ಶಿವಮೊಗ್ಗದ ಗುತ್ತಿ ಮಲೆನಾಡ್ ಆಸ್ಪತ್ರೆಗೆ ತೋಟದ ಮಾಲೀಕರು ಚಿಕಿತ್ಸೆಗೆ ಸೇರ್ಪಡೆ ಮಾಡಿದ್ದರು. ಬಳಿಕ ಹೆಚ್ಚುವರಿ ಚಿಕಿತ್ಸೆಗೆ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ತೋಟದ ಮ್ಯಾನೇಜರ್ ಬಂದು, ನೀವು ಹೊರಗಡೆ ಬಿದ್ದು ಗಾಯಗೊಂಡಿರುವುದು ಎಂದು ಹೇಳಿ ಪೊಲೀಸರಿಗೆ ದೂರು ಕೊಡಿ, ನಿಮ್ಮ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳುವ ಜತೆಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳಿ ಹೋಗಿದ್ದರು. ಬಳಿಕ ಯಾವುದೇ ನೆರವು ಸಿಕ್ಕಿಲ್ಲ, ಯಾರೂ ಬಂದು ವಿಚಾರಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಎನ್.ಆರ್.ಪುರ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಸ್ವಂತ ಖರ್ಚಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೆ. ಬಳಿಕ ಮಾಲೀಕ ಯುವರಾಜಗೌಡನ ಬಳಿ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಾಗ, ನಮ್ಮ ಬಳಿ ಹಣ ಇಲ್ಲ, ನೀವೇ ಏನಾದರೂ ಮಾಡಿಕೊಳ್ಳಿ ಎಂದು ಕೈಬಿಟ್ಟಿದ್ದಾರೆ. ಆದ್ದರಿಂದ ತಾವು ಪರಿಶೀಲಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಮಹಿಳೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | KRS Brindavan | ಚಿರತೆ ಕಾಟಕ್ಕೆ ತಿಂಗಳಿನಿಂದ ಮುಚ್ಚಿದ್ದ ಕೆಆರ್‌ಎಸ್ ಬೃಂದಾವನ ಮತ್ತೆ ಪ್ರವೇಶ ಮುಕ್ತ