ಗಂಗಾವತಿ: ದೊಡ್ಡಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಮರಳು (Sand) ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಗಾವತಿ (Gangavathi) ತಾಲೂಕಿನಲ್ಲಿ ಎರಡು ಕಡೆ ಚೆಕ್‌ಪೋಸ್ಟ್ (Checkposts) ಸ್ಥಾಪಿಸುವ ಉದ್ದೇಶವಿದೆ ಎಂದು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.
ಐದು ತಿಂಗಳ ಬಳಿಕ ಗುರುವಾರ ನಗರದ ಮಂಥನ ಸಭಾಂಗಣದಲ್ಲಿ ನಡೆದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ, ಈ ಹಿನ್ನಲೆ ಮರಳಿ ಹಾಗೂ ಗಂಗಾವತಿಯ ತಹಸೀಲ್ದಾರ್ ಕಚೇರಿ ಸಮೀಪ ಎರಡು ಕಡೆ ಚೆಕ್‌ಪೋಸ್ಟ್ ಸ್ಥಾಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೇ ಬಹುತೇಕ ಮರಳು ಸಾಗಿಸುವ ವಾಹನಗಳಿಗೆ ನಂಬರ್ ಪ್ಲೇಟ್ ಇರುವುದಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಆರ್‌ಟಿಒ ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಕ್ರಮವಾಗಿ ಸಾಗಿಸುವ ಮರಳು ಸೇರಿದಂತೆ ನೈಸರ್ಗಿಕ ಖನಿಜಗಳ ಸಂರಕ್ಷಣೆ ಕೇವಲ ಒಂದೇ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಬದಲಿಗೆ ನಾನಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಈ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಇದನ್ನೂ ಓದಿ: Chandrayaan -3 : ರೋವರ್ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ
ಗಂಗಾವತಿಯ ಸಿದ್ಧಿಕೇರಿ, ಬಸವಪಟ್ಟಣ, ವೆಂಕಟಗಿರಿಯಲ್ಲಿ ನಡೆಯುತ್ತಿರುವ ದೊಡ್ಡಮಟ್ಟದ ಫಿಲ್ಟರ್ ಮರಳು ಘಟಕಗಳ ಮಾಹಿತಿ ಲಭಿಸಿದ್ದು, ಇವುಗಳ ಮೇಲೆ ದಾಳಿ ಮಾಡುವುದು ಸೇರಿದಂತೆ ನಿಯಂತ್ರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೇ ಅಕ್ರಮ ಮರಳು ಸಾಗಿಸುವ ಸಂದರ್ಭದಲ್ಲಿ ಸಿಕ್ಕುಬೀಳುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಚಿಂತನೆ ನಡೆದಿದೆ. ಮರಳು ಸಾಗಿಸುವ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿರುವ ಮರಳು ಬ್ಲಾಕ್‌ಗಳನ್ನು ಗುರುತಿಸುವ ಕೆಲಸ ಶೀಘ್ರ ಮಾಡಲಾಗುವುದು. ಅಗತ್ಯ ಬಿದ್ದರೆ ಪ್ರಮುಖ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕೆಲಸ ಮಾಡಲಾಗುವುದು ಎಂದು ಸಹಾಯಕ ಆಯುಕ್ತರು ತಿಳಿಸಿದರು.
ಇದನ್ನೂ ಓದಿ: Asia Cup 2023: ಯೋ-ಯೋ ಟೆಸ್ಟ್ ಪಾಸ್ ಆದ ನಾಯಕ ರೋಹಿತ್,ಹಾರ್ದಿಕ್
ಈ ಸಂದರ್ಭದಲ್ಲಿ ಗಂಗಾವತಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ತಾಲೂಕು ಪಂಚಾಯಿತಿ ಇಒ ಲಕ್ಷ್ಮಿದೇವಿ, ಗಂಗಾವತಿ ನಗರ ಠಾಣೆಯ ಪಿಐ ಅಡಿವೆಪ್ಪ, ಗ್ರಾಮೀಣ ಠಾಣೆ ಪಿಐ ಮಂಜುನಾಥ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.