Site icon Vistara News

Lalitha Natarajan: ಚೆನ್ನೈನ ಲಲಿತಾ ನಟರಾಜನ್‌ಗೆ ಅಮೆರಿಕದ ಪ್ರತಿಷ್ಠಿತ ಇಕ್ಬಾಲ್ ಮಸಿಹ್‌ ಪ್ರಶಸ್ತಿ

Lalitha Natarajan

#image_title

ಚೆನ್ನೈ: ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಲೇಬರ್ ವತಿಯಿಂದ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ನಡೆಸಿದ ಪ್ರಯತ್ನಗಳಿಗಾಗಿ ನೀಡುವ 2023ನೇ ಸಾಲಿನ ಇಕ್ಬಾಲ್ ಮಸಿಹ್‌ ಪ್ರಶಸ್ತಿಗೆ ಚೆನ್ನೈನ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ ಲಲಿತಾ ನಟರಾಜನ್ ಭಾಜನರಾಗಿದ್ದಾರೆ. ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರೇವಿನ್, ಈ ಪ್ರಶಸ್ತಿಯನ್ನು ಚೆನ್ನೈನ ಯು.ಎಸ್. ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ಸಮಾರಂಭದಲ್ಲಿ ಲಲಿತಾ ನಟರಾಜನ್ (Lalitha Natarajan) ಅವರಿಗೆ ಪ್ರದಾನ ಮಾಡಿದರು.

ಲಲಿತಾ ನಟರಾಜನ್ ಅವರು ಬಾಲಕಾರ್ಮಿಕ ಪದ್ಧತಿಯಲ್ಲಿ ಹಕ್ಕು-ಆಧಾರಿತ ವಿಧಾನಗಳನ್ನು ಅಳವಡಿಸಲು ವಕೀಲರು ಮತ್ತು ಹೋರಾಟಗಾರರಾಗಿ ತಮ್ಮ ವೃತ್ತಿಜೀವನದುದ್ದಕ್ಕೂ ದುಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಬಾಲಕಾರ್ಮಿಕರ ಶೋಷಣೆಗೆ ಅಂತ್ಯ ಹಾಡಲು, ಮಕ್ಕಳ ಕಳ್ಳಸಾಗಣೆಗೆ ಒಳಗಾದವರನ್ನು ಅದರಲ್ಲೂ ಮುಖ್ಯವಾಗಿ ಜೀತಕ್ಕಿದ್ದವರನ್ನು ಗುರುತಿಸಿ ಅವರ ರಕ್ಷಣೆ ಮಾಡಲು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ | Chandrayana 3: ಚಂದ್ರಯಾನ-3ಕ್ಕೆ ದಿನಾಂಕ ಫಿಕ್ಸ್​ ಎಂದ ಇಸ್ರೋ ಮುಖ್ಯಸ್ಥ; ಯಾವಾಗ?

ತಮಿಳುನಾಡು ಸರ್ಕಾರದ ಸಾಮಾಜಿಕ ರಕ್ಷಣೆ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿ (ಉತ್ತರ ವಲಯ)ದ ಸದಸ್ಯರಾಗಿ ಲಲಿತಾ ನಟರಾಜನ್‌ ಅವರು ಬಾಲಕಾರ್ಮಿಕ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ(ಪೋಕ್ಸೊ) ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ದೊರೆಯುವಂತೆ ಮಾಡಿದ್ದಾರೆ. ಬಾಲಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿರುವುದಲ್ಲದೆ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರಿಗೆ ಕಾನೂನು ಮತ್ತು ಕೌನ್ಸೆಲಿಂಗ್‌ಗೆ ಬೆಂಬಲ ನೀಡಿದ್ದಾರೆ.

ಇಕ್ಬಾಲ್ ಮಸಿಹ್‌ ಪ್ರಶಸ್ತಿ ಯು.ಎಸ್. ಕಾಂಗ್ರೆಸ್ ನೀಡುವ ಪ್ರಶಸ್ತಿಯಾಗಿದ್ದು, ಇದರಲ್ಲಿ ಯಾವುದೇ ನಗದು ಬಹುಮಾನ ಇರುವುದಿಲ್ಲ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಸಾಧಾರಣ ಕೊಡುಗೆ ನೀಡಿದವರನ್ನು ಗೌರವಿಸಲು ಈ ಪ್ರಶಸ್ತಿಯನ್ನು 2008ರಲ್ಲಿ ಸೆಕ್ರೆಟರಿ ಆಫ್ ಲೇಬರ್‌ನಿಂದ ಪ್ರಾರಂಭಿಸಲಾಗಿದೆ.

ಪಾಕ್‌ ಬಾಲ ಕಾರ್ಮಿಕ ಇಕ್ಬಾಲ್ ಮಸಿಹ್‌ ಸ್ಮರಣಾರ್ಥ ಪ್ರಶಸ್ತಿ

ಪಾಕಿಸ್ತಾನದ ಇಕ್ಬಾಲ್ ಮಸಿಹ್‌ ಎಂಬ ಬಾಲಕ ನಾಲ್ಕರ ಎಳೆ ವಯಸ್ಸಿನಲ್ಲೇ ಕಾರ್ಪೆಟ್‌ ನೇಕಾರನಾಗಿ ಜೀತಕ್ಕೆ ಮಾರಾಟವಾಗಿದ್ದ. ತನ್ನ 10ನೇ ವಯಸ್ಸಿನಲ್ಲಿ ಅದರಿಂದ ಪಾರಾಗಿ ಮಕ್ಕಳ ಶೋಷಣೆಯ ವಿರುದ್ಧ ದನಿಯೆತ್ತಿದ. ಅದಕ್ಕಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಅವನನ್ನು ಹುಡುಕಿಕೊಂಡು ಬಂದವು. ಆದರೆ, ಆತ 12ನೇ ವರ್ಷದವನಿದ್ದಾಗ 1995ರಲ್ಲಿ ದುರದೃಷ್ಟಕರ ರೀತಿಯಲ್ಲಿ ಕೊನೆಯುಸಿರೆಳೆದ. ಹೀಗಾಗಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹೋರಾಟ ಮತ್ತು ಅದರ ಬಗೆಗಿನ ತಿಳಿವಳಿಕೆ ಹೆಚ್ಚಿಸುವ ಸಲುವಾಗಿ ಇಕ್ಬಾಲ್ ಮಸಿಹ್‌ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರತಿವರ್ಷ ಜೂನ್‌ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಗುತ್ತದೆ, ಈ ಪ್ರಶಸ್ತಿಯೂ ಇದರ ಭಾಗವಾಗಿದೆ.

ಇದನ್ನೂ ಓದಿ | Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರೇವಿನ್, “ಯು.ಎಸ್. ಸರ್ಕಾರ ಮತ್ತು ಅಮೆರಿಕದ ಜನರಿಗೆ ಜೀತ ಪದ್ಧತಿಯ ವಿರುದ್ಧದ ಹೋರಾಟ ಅತ್ಯಂತ ಪ್ರಮುಖವಾಗಿದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನ 2023ನೇ ಸಾಲಿನ ಇಕ್ಬಾಲ್ ಮಸಿಹ್‌ ಪ್ರಶಸ್ತಿಯನ್ನು ಈ ಕ್ಷೇತ್ರದ ನಿಜವಾದ ಚಾಂಪಿಯನ್ ಲಲಿತಾ ನಟರಾಜನ್ ಅವರಿಗೆ ಕೊಡುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಅವರ ದಿಟ್ಟ ಪ್ರಯತ್ನಗಳು ಭಾರತದ ಯುವಜನರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಪಡೆಯುವಲ್ಲಿ ನೆರವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಲಿತಾ ನಟರಾಜನ್ ಮಾತನಾಡಿ, “ಯು.ಎಸ್. ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನಿಂದ ಪ್ರತಿಷ್ಠಿತ ಇಕ್ಬಾಲ್ ಮಸಿಹ್‌ ಪ್ರಶಸ್ತಿ ಸ್ವೀಕರಿಸುವುದು ನನಗೆ ಬಹಳ ಗೌರವವೆನಿಸಿದೆ. ಈ ಪ್ರಶಸ್ತಿಯು ನನ್ನನ್ನು ಮಕ್ಕಳಪರ ಮತ್ತಷ್ಟು ಕಾರ್ಯಗಳಿಗೆ ತೊಡಗಿಕೊಳ್ಳಲು ಸ್ಫೂರ್ತಿ ನೀಡಿದೆ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆಯಾಗಿ ನಾನು ಹಲವಾರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು, ನ್ಯಾಯಾಂಗ ಮತ್ತು ಪೊಲೀಸರು, ಮಾನವ ಹಕ್ಕುಗಳ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸಿ ಮಕ್ಕಳ ಹಕ್ಕುಗಳ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದೇನೆ ಎಂದು ತಿಳಿಸಿದರು.

Exit mobile version