ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಮಾರ್ಚ್ 24ರಿಂದ 26ರವರೆಗೆ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಜಯಂತ್ಯುತ್ಸವ, ಶ್ರೀ ಅಮರನಾರೇಯಣಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಸದ್ಗುರು ಕೈವಾರ ತಾತಯ್ಯನವರ ರಥೋತ್ಸವ (Kaivara Tatayya Jayanthi) ಹಮ್ಮಿಕೊಳ್ಳಲಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮ್ ತಿಳಿಸಿದ್ದಾರೆ.
ಮಾ.24ರಂದು ಕೈವಾರ ತಾತಯ್ಯನವರ ಜಯಂತಿ, 25ರಂದು ಶ್ರೀ ಅಮರನಾರೇಯಣ ಸ್ವಾಮಿ ರಥೋತ್ಸವ ಹಾಗೂ 26ರಂದು ಸದ್ಗುರು ಕೈವಾರ ತಾತಯ್ಯನವರ ರಥೋತ್ಸವ ನಡೆಯಲಿದೆ. ಸದ್ಗುರು ಕೈವಾರ ತಾತಯ್ಯನವರ ಜಯಂತಿಯ ಪ್ರಯುಕ್ತ ಮಾ.24ರಂದು ಬೆಳಗ್ಗೆ 5.30ರಿಂದ ರಾತ್ರಿ 8.30ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಭಾನುವಾರ ಬೆಳಗ್ಗೆ 5.30ಕ್ಕೆ ಘಂಟಾನಾದ, ಸುಪ್ರಭಾತ ಮತ್ತು ಗೋಪೂಜೆಯನ್ನು ನೆರವೇರಿಸಲಾಗುತ್ತದೆ. 6.30ಕ್ಕೆ ಕೈವಾರದ ವಿದ್ವಾನ್ ತಿಪ್ಪರಾಜು ಮತ್ತು ತಂಡದಿಂದ ʼನಾದಸ್ವರʼ ವಾದನ ನಡೆಯಲಿದೆ. ಬೆಳಗ್ಗೆ 10ಕ್ಕೆ ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಮಂಗಳಾರತಿ ಸಮರ್ಪಿಸಲಾಗುತ್ತದೆ. ಮಧ್ಯಾಹ್ನ 1ಕ್ಕೆ ವಿವಿಧ ಭಜನಾ ಮಂಡಳಿಯವರಿಂದ ಸಾಮೂಹಿಕ ನಾಮ ಸಂಕೀರ್ತನೆ ನಡೆಯಲಿದೆ.
ಇದನ್ನೂ ಓದಿ | ತಾತಯ್ಯ ತತ್ವಾಮೃತಂ: ಕಲಿಯುಗದ ಯುಗಧರ್ಮ
ಮಧ್ಯಾಹ್ನ 3.30ಕ್ಕೆ ಆದಿಚುಂಚನಗಿರಿ ಮಠದ ವಿದ್ವಾನ್ ಶ್ರೀ ಸಾಯಿಕೀರ್ತಿನಾಥ ಸ್ವಾಮಿಗಳಿಂದ ಗಾಯನ, ಸಂಜೆ 4ಕ್ಕೆ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಅವರಿಂದ ನಾಮಸಂಕೀರ್ತನೆ ನಡೆಯಲಿದೆ.
ಸಂಜೆ 4.45ಕ್ಕೆ ಅನಂತಪುರದ ಅಷ್ಟಾವಧಾನಿಗಳು ಡಾ.ಜೋಸ್ಯುಲ ಸದಾನಂದಶಾಸ್ತಿ ಅವರಿಂದ ʼಸದ್ಗುರು ಶ್ರೀಯೋಗಿನಾರೇಯಣ ತಾತಯ್ಯ ವಿರಚಿತ ಬ್ರಹ್ಮಾಂಡಪುರಿ ಶತಕʼ ವಿಷಯದ ಕುರಿತು ಉಪನ್ಯಾಸವಿರಲಿದೆ. ʼಮಲ್ಲಾರʼ ಮಾಸಪತ್ರಿಕೆ ಸಂಪಾದಕರಾದ ಡಾ.ಬಾಬು ಕೃಷ್ಣಮೂರ್ತಿ ಅವರು ಉಪಸ್ಥಿತರಿರಲಿದ್ದಾರೆ.
ಸಂಜೆ 5.30ಕ್ಕೆ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಅವರಿಂದ ʼಆತ್ಮಬೋಧಾಮೃತ’ ವಿಶೇಷ ಪ್ರವಚನವಿರಲಿದೆ. ರಾತ್ರಿ 7ಕ್ಕೆ ಬೆಂಗಳೂರಿನ ಶ್ರೀ ರುದ್ರಾಕ್ಷ ನಾಟ್ಯಾಲಯದ ಕಲಾ ನಿರ್ದೇಶಕರಾದ ವಿದುಷಿ ಪದ್ಮನಿ ಎಸ್ ಉಪಾಧ್ಯ ಅವರ ತಂಡದಿಂದ ʼಕೈವಾರ ತಾತಯ್ಯನವರ ಜೀವನ ಚರಿತ್ರೆ ನೃತ್ಯರೂಪಕʼ ಪ್ರದರ್ಶನ ಇರಲಿದೆ. ಸಂಜೆ 8.30 : ಮಹಾಮಂಗಳಾರತಿ ನಡೆಯಲಿದೆ.
ಮಾ.25ರಂದು ಶ್ರೀ ಅಮರನಾರೇಯಣಸ್ವಾಮಿ ರಥೋತ್ಸವ
ಮಾ. 25ರಂದು ಸೋಮವಾರ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ 8ಕ್ಕೆ ಶ್ರೀದೇವಿ ಭೂದೇವಿ ಸಮೇತ ಶ್ರೀ ಅಮರನಾರೇಯಣಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಲಿದೆ. ಬೆಳಗ್ಗೆ 10-30ಕ್ಕೆ ಸದ್ಗುರು ಶ್ರೀ ತಾತಯ್ಯನವರನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಅಮರನಾರೇಯಣಸ್ವಾಮಿ ದೇವಾಲಯಕ್ಕೆ ಸಂಕೀರ್ತನೆಯೊಂದಿಗೆ ಕರೆತರಲಾಗುವುದು.
ಬೆಳಗ್ಗೆ 11ಕ್ಕೆ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ʼನಾರೇಯಣʼ ನಾಮ ಮುದ್ರೆಯನ್ನು ನೀಡಿದ ಆರಾಧ್ಯದೈವ ಶ್ರೀ ಅಮರನಾರೇಯಣ ಸ್ವಾಮಿಯವರಿಗೆ ಶ್ರೀಕೃಷ್ಣಗಂಧೋತ್ಸವ ಸೇವೆಯನ್ನು ಸದ್ಗುರು ಶ್ರೀ ತಾತಯ್ಯನವರ ವತಿಯಿಂದ ಸಮರ್ಪಿಸಲಾಗುವುದು.
ಮಧ್ಯಾಹ್ನ 1 ಗಂಟೆಗೆ ʼಶ್ರೀ ಅಮರನಾರೇಯಣಸ್ವಾಮಿ ಬ್ರಹ್ಮರಥೋತ್ಸವʼವನ್ನು ಶ್ರದ್ಧಾ-ಭಕ್ತಿಗಳಿಂದ ನೆರವೇರಿಸಲಾಗುವುದು. ಸಂಜೆ 4.33ಕ್ಕೆ ಶ್ರೀಕ್ಷೇತ್ರ ಆಲಂಬಗಿರಿಯಲ್ಲಿ “ಗಿರಿಪ್ರದಕ್ಷಿಣೆ – ದೀಪೋತ್ಸವ” ಇರುತ್ತದೆ. ರಾತ್ರಿ 9ಕ್ಕೆ ವಿ॥ ತೆನಾಲಿ ನಾಗಮಣಿ ಭಾಗವತಾರಿಣಿ ಅವರಿಂದ ʼಹರಿಕಥೆʼ, ರಾತ್ರಿ 1ಗಂಟೆಗೆ ವಿ॥ ಶ್ರೀ ಎ.ಎಲ್.ವೆಂಕಟೇಶ್ ಮತ್ತು ತಂಡದವರಿಂದ ʼಬುರ್ರಕಥೆʼ ಇರಲಿದೆ.
ಇದನ್ನೂ ಓದಿ | ತಾತಯ್ಯ ತತ್ವಾಮೃತಂ ಅಂಕಣ: ಭಕ್ತಜನಪೋಷ… ವೈಕುಂಠ ವಿಠ್ಠಲೇಶ…
ಮಾ.26ರಂದು ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ರಥೋತ್ಸವ
ಪ್ರಾತಃ ಸ್ಮರಣೀಯರಾದ ಕಾಲಜ್ಞಾನಿ ಶ್ರೀ ಯೋಗಿನಾರೇಯಣ ತಾತಯ್ಯನವರು ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದು, ಶ್ರೀ ಕ್ಷೇತ್ರ ಕೈವಾರದಲ್ಲಿ ಜೀವ ಸಮಾಧಿಸ್ಥರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. “ಕೊದವುಲನ್ನಿ ತೀರೆ ಮಾಕು ಇದೇ ಕಡೆ ಜನ್ಮ” ಎಂದು ಹೇಳಿರುವ ಹಾಗೂ ಹುಟ್ಟು ಸಾವುಗಳನ್ನು ಗೆದ್ದಿರುವ ಸದ್ಗುರು ತಾತಯ್ಯನವರ ದಾಸಾನುದಾಸರೆಲ್ಲರೂ ಸೇರಿ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ಎಂ.ಆರ್. ಜಯರಾಮ್ ಅವರ ನೇತೃತ್ವದಲ್ಲಿ ತಾತಯ್ಯನವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ.
ಮಾ.26ರಂದು ಮಂಗಳವಾರ ಬೆಳಗ್ಗೆ 9ಕ್ಕೆ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ನಾಮ ಸಂಕೀರ್ತನೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಲಿದೆ.
ಮಧ್ಯಾಹ್ನ 12-30 ಗಂಟೆಗೆ ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ರಥೋತ್ಸವ ನೆರವೇರಲಿದೆ. ರಾತ್ರಿ 9ಕ್ಕೆ ನರಸಾಪುರದ ವಿಶ್ವಗುರು ಶ್ರೀ ಬಸವಣ್ಣನವರ ಕನ್ನಡ ಕಲಾಸಂಘದಿಂದ ʼಶ್ರೀಕೃಷ್ಣ ಸಂಧಾನʼ ಕನ್ನಡ ಪೌರಾಣಿಕ ನಾಟಕ ಪ್ರದರ್ಶನವಿರಲಿದೆ.
ರಾತ್ರಿ 10 ಗಂಟೆಗೆ ಸದ್ಗುರು ಶ್ರೀ ತಾತಯ್ಯನವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ರಥೋತ್ಸವವನ್ನು ವಿಶೇಷ ವಾದ್ಯಗೋಷ್ಠಿ, ಭಜನಾ ಕಾರ್ಯಕ್ರಮ, ಸಂಕೀರ್ತನೆ, ಹರಿಕಥೆ, ಬುರ್ರಕಥೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಭಕ್ತರು ಈ ಜಯಂತೋತ್ಸವ ಹಾಗೂ ಆಕರ್ಷಕ ರಥೋತ್ಸವ ಕಾರ್ಯಕ್ರಮದಲ್ಲಿ ಒಂದು ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಕೃಪೆಗೆ ಪಾತ್ರರಾಗಬೇಕಾಗಿ ಮಠದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಕೋರಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಉಪವಾಸದ ಬಹುಲತೆ
ಸದ್ಗುರು ಶ್ರೀ ಯೋಗಿ ನಾರೇಯಣ ಮಠ, ಶ್ರೀಕ್ಷೇತ್ರ ಕೈವಾರ
ಶ್ರೀಕ್ಷೇತ್ರ ಕೈವಾರ ಹರಿಹರ ಕ್ಷೇತ್ರ ಪೌರಾಣಿಕ ಐತಿಹ್ಯದ ಹಿನ್ನೆಲೆಯಿಂದ ಕೂಡಿರುವ ಪರಮ ಪವಿತ್ರವಾದ ಶ್ರೀಕ್ಷೇತ್ರ ಕೈವಾರದಲ್ಲಿ ಕ್ರಿ.ಶ.1726 ಪಾಲ್ಗುಣ ಮಾಸದ ಹುಣ್ಣಿಮೆಯಂದು ಶ್ರೀಯೋಗಿನಾರೇಯಣ ತಾತಯ್ಯನವರು ಅವತಾರಪುರುಷರಾಗಿ ಜನ್ಮ ತಳೆದಿದ್ದಾರೆ. ಭಕ್ತಿಪಂಥದ ಪ್ರತಿಪಾದಕರಾದ ಶ್ರೀಯೋಗಿನಾರೇಯಣ ತಾತಯ್ಯನವರು ತಪಸ್ಸಿದ್ದಿಯನ್ನು ಪಡೆದ ಸಾಧಕ ಯೋಗಿಗಳು, ಅಜ್ಞಾನದ ಗಾಢಾಂಧಕಾರದಲ್ಲಿ ನಲುಗಿ ಹೋಗುತ್ತಿದ್ದ ಸಮಾಜವನ್ನು ಜ್ಞಾನ ಬೋಧೆಯಿಂದ ತಿದ್ದಿ ಉದ್ದರಿಸಿದ ಸಮಾಜ ಸುಧಾರಕರು, ತತ್ವ ಚಿಂತನೆಯ ಮೂಲಕ ಹಲವಾರು ಗ್ರಂಥಗಳನ್ನು ರಚಿಸಿದ ವರಕವಿಗಳು. ಅಂತರ್ಮುಖ ಸಾಧನೆಯಿಂದ ಅತೀಂದ್ರಿಯವಾದ ಶಕ್ತಿಯನ್ನು ಪಡೆದು, ದಿವ್ಯದೃಷ್ಟಿಯಿಂದ ವಿಶ್ವ ಭವಿಷ್ಯವನ್ನು ನುಡಿದಿರುವ ತ್ರಿಕಾಲಜ್ಞಾನಿಗಳು. ಪ್ರಾತ: ಸ್ಮರಣೀಯರಾದ ಕಾಲಜ್ಞಾನಿ ಶ್ರೀ ಯೋಗಿನಾರೇಯಣ ತಾತಯ್ಯನವರು ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದು, ಶ್ರೀ ಕ್ಷೇತ್ರ ಕೈವಾರದಲ್ಲಿ ಜೀವ ಸಮಾಧಿಸ್ಥರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಮಹೀಮಾನ್ವಿತರಾದ ಸದ್ಗುರು ತಾತಯ್ಯನವರ ಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.