ಚಿಕ್ಕಬಳ್ಳಾಪುರ: ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಯುವತಿಯೊಬ್ಬಳನ್ನು ಬಿಎ, ಎಲ್‌ಎಲ್‌ಬಿ ಪದವೀಧರ ಯುವಕ ವಿವಾಹವಾಗಲು ಮುಂದಾಗುವ ಮೂಲಕ ಮಾದರಿಯಾಗಿದ್ದಾನೆ. ಯುವತಿ ಕಾಲೇಜು ಶಿಕ್ಷಣ ಮೊಟಕುಗೊಳಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದು ದಿನ ದೂಡುತ್ತಿದ್ದಳು. ಇದನ್ನರಿತ ಯುವಕ, ಆಕೆಯನ್ನು ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿ ನಿವಾಸಿಯಾಗಿದ್ದ ಮಮತಾ (23) ಬೆಂಗಳೂರಿನ ಬಿ.ಎಂ.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ, ಮೂರು ವರ್ಷಗಳ ಹಿಂದೆ ಟೈಲರ್ ಆಗಿದ್ದ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹಾಗೆಯೇ ಒಂದು ವರ್ಷದ ಹಿಂದೆ ತಾಯಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಅಣ್ಣ ಮಾನಸಿಕ ಅಸ್ವಸ್ಥನಂತಾಗಿ ಹಾಸಿಗೆ ಹಿಡಿದಿದ್ದ. ಇದರಿಂದ ಕುಗ್ಗಿ ಹೋಗಿದ್ದ ಮಮತಾ, ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದು ದಿನ ದೂಡುತ್ತಿದ್ದಳು. ಜೀವನ ಮುಗಿದೆ ಹೊಯಿತು ಎನ್ನುವಷ್ಟರಲ್ಲಿ ಬಾಗೇಪಲ್ಲಿಯ ಯುವಕ ಆಕೆಯನ್ನು ವಿವಾಹವಾಗಲು ಮುಂದೆ ಬಂದಿರುವುದರಿಂದ ಯುವತಿ ಬಾಳಲ್ಲಿ ಮತ್ತೆ ಸಂತಸ ಮೂಡಿದೆ.
ದೂರದ ಸಂಬಂಧಿಗಳು ಮಮತಾಳನ್ನು ಮಹಿಳಾ ಸ್ವಾಧಾರ ಕೇಂದ್ರದಲ್ಲಿ ಸೇರಿಸಿ ಸುಮ್ಮನಾಗಿದ್ದರು. ಆದರೆ, ಇತ್ತೀಚೆಗೆ ಸಂಬಂಧಿಕರೊಬ್ಬರು ಮಮತಾ ಕಥೆಯನ್ನು ಬಾಗೇಪಲ್ಲಿ ತಾಲೂಕಿನ ಗುರಾಲದಿನ್ನೆ ನಿವಾಸಿ ಸೋಮಶೇಖರ್ ಎನ್ನುವವರ ಗಮನಕ್ಕೆ ತಂದಿದ್ದಾರೆ. ಇದನ್ನರಿತ ಯುವಕ, ಅನಾಥೆಯಾಗಿದ್ದ ಮಮತಾಳನ್ನು ತಾನೇ ಮದುವೆ ಆಗುತ್ತೇನೆ ಎಂದು ಮುಂದೆ ಬಂದು ಮನೆಯವರನ್ನು ಒಪ್ಪಿಸಿ ನವೆಂಬರ್ 3 ಮತ್ತು 4ರಂದು ಮದುವೆ ನಿಶ್ಚಯ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ | ಆಘಾತಕಾರಿ ಸುದ್ದಿ | ಕೇವಲ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಓದುತ್ತಿದ್ದಾಗ ಕುಸಿದು ಬಿದ್ದು ಮೃತ್ಯು