Site icon Vistara News

Modi In Bengaluru | ಮೋದಿ ಕಾರ್ಯಕ್ರಮಕ್ಕೆ ಬಂದಿದ್ದರಂತೆ ಕಾಂಟ್ರ್ಯಾಕ್ಟ್‌ ಜನ; ಹಣ ಕೊಡದಿದ್ದಕ್ಕೆ ಪೊಲೀಸ್‌ ಸ್ಟೇಷನ್‌ ಎದುರು ಪ್ರತಿಭಟನೆ!

modi in bengaluru

ಚಿಕ್ಕಬಳ್ಳಾಪುರ: ದೇವನಹಳ್ಳಿಯಲ್ಲಿ ಶುಕ್ರವಾರ (ನ.12) ನಡೆದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Bengaluru) ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಹಣ ನೀಡುವುದಾಗಿ ಹೇಳಿ ಕೂಲಿ ಕಾರ್ಮಿಕರನ್ನು ಕರೆತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯಕ್ರಮಕ್ಕೆ ಬಂದ ಕಾರ್ಮಿಕರಿಗೆ ಹಣ ನೀಡದೇ ಇದ್ದಾಗ ಅವರೆಲ್ಲ ಶಿಡ್ಲಘಟ್ಟ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಕಾರ್ಯಕ್ರಮ ಮುಗಿದ ಬಳಿಕ ಪ್ರತಿಯೊಬ್ಬರಿಗೆ 500 ರೂಪಾಯಿ ಹಾಗೂ ಊಟ ಕೊಡುವುದಾಗಿ ಹೇಳಿದ್ದರಂತೆ. ಆದರೆ, ಹಣ ನೀಡದೇ ವಂಚನೆ ಮಾಡಿರುವುದರಿಂದ ಕೂಲಿಕಾರ್ಮಿಕರು ರೊಚ್ಚಿಗೆದ್ದು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು ಎನ್ನಲಾಗಿದೆ. ನಮ್ಮ ಕೂಲಿ ನಮಗೆ ಕೊಡಿ ಎಂದು ಘೋಷಣೆ ಕೂಗಿ ಅವರು ಆಕ್ರೋಶ ಹೊರಹಾಕಿದರು.

ಬಿಜೆಪಿ ಮುಖಂಡರೊಬ್ಬರು ಸುಮಾರು 40 ಮಂದಿಯನ್ನು ಕರೆ ತರುವಂತೆ ಕೂಲಿಕಾರ್ಮಿಕರ ಮುಖಂಡನೊಬ್ಬನಿಗೆ ತಿಳಿಸಿದ್ದರು. ಒಪ್ಪಂದದಂತೆ ಮುಖಂಡ ಕೂಲಿ ಕಾರ್ಮಿಕರನ್ನು ಬಸ್ ಹತ್ತಿಸಿ ಕರೆತಂದಿದ್ದ. ಆದರೆ ಊಟವೂ ಇಲ್ಲ, 500 ರೂಪಾಯಿಯೂ ಇಲ್ಲದೇ ಮೋಸ ಮಾಡಿದ್ದಾರೆಂದು ಕಾರ್ಮಿಕರು ಕಿಡಿಕಾರಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ನಾವು ಯಾರಿಗೂ ಹಣ ಕೊಡುವುದಾಗಿ ಹೇಳಿಲ್ಲ. ಇವರು ಯಾರೂ ನಮ್ಮ ಕಾರ್ಯಕರ್ತರು ಅಲ್ಲ, ಹಣಕ್ಕಾಗಿ ಅಷ್ಟೇ ಹೀಗೆ ಪ್ರತಿಭಟನೆ ಮಾಡಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ಅವರಿಗೆ ಹಣವನ್ನು ಕೊಡುತ್ತೇವೆ ಬಿಡಿ ಎಂದಿದ್ದಾರೆ!

ಬಿಜೆಪಿಯ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯಲು ಹಣ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವ ಬೆನ್ನಲ್ಲೆ ಚಿಕ್ಕಬಳ್ಳಾಪುರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿರುವುದು, ಕಾಂಗ್ರೆಸ್ ಗೆ ಮೊತ್ತೊಂದು ಅಸ್ತ್ರ ಸಿಕ್ಕಿದಂತಾಗಿದೆ.

ಇದನ್ನೂ ಓದಿ | Narendra Modi | ನಾನು ನಿತ್ಯ 2-3 ಕೆಜಿ ಬೈಗುಳ ತಿನ್ನುತ್ತೇನೆ, ಅದೇ ಪೌಷ್ಟಿಕಾಂಶ ಎಂದು ಮೋದಿ ಹೇಳಿದ್ದೇಕೆ?

Exit mobile version