Site icon Vistara News

Toilet Cleaning: ಕುದಪಕುಂಟೆ ಶಾಲಾ ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್ ; ಶಿಕ್ಷಕಿ ಸಸ್ಪೆಂಡ್‌

Kudapakunte Government Higher Primary School Toilet Cleaning

ಚಿಕ್ಕಬಳ್ಳಾಪುರ: ಕೋಲಾರದಲ್ಲಿ ಮಲದ ಗುಂಡಿಗೆ ಶಾಲಾ ಮಕ್ಕಳನ್ನು ಇಳಿಸಿ‌‌ ಸ್ವಚ್ಛ ಮಾಡಿಸಿದ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರಲ್ಲಿ ಒಂದರ ಮೇಲೊಂದು ಪ್ರಕರಣಗಳು (Toilet Cleaning) ಬೆಳಕಿಗೆ ಬರುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರುವ ವಿಡಿಯೊವೊಂದು ವೈರಲ್ ಆಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಕುದಪಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಡ್ಲಘಟ್ಟ ತಾಲೂಕಿನ ಕುದಪಕುಂಟೆ ಗ್ರಾಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಲೆಗೆ ಅಧಿಕಾರಿಗಳ ತಂಡ‌ ಭೇಟಿ ನೀಡಿದೆ. ತಾಲೂಕಿನ ಬಿಇಒ ನರೇಂದ್ರ ಕುಮಾರ್, ಇಓ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಜಗದೀಶ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಗೌಪ್ಯ ಹೇಳಿಕೆಯನ್ನು ಪಡೆದಿದ್ದಾರೆ.

ಪೆನ್ನು ಹಿಡಿಯಬೇಕಿದ್ದ ಮಕ್ಕಳ ಕೈಗೆ ಶಿಕ್ಷಕರು ಪೊರಕೆ ಕೊಟ್ಟು ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಶಾಲೇಲಿ ಮಕ್ಕಳಿಂದ ಟಾಯ್ಲೆಟ್‌ ಕ್ಲೀನ್ ಮಾಡಿಸಿದ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪೋಷಕರು ತಿರುಗಿ ಬಿದ್ದಿದ್ದಾರೆ.‌ ಶಾಲಾ ಮುಖ್ಯ ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮಕ್ಕೆ ಪೋಷಕರು ಒತ್ತಾಯಸಿದ್ದಾರೆ. ಪೋಷಕರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಬಿಇಒ ನರೇಂದ್ರ ಕುಮಾರ್ ಅವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಇದನ್ನೂ ಓದಿ: Toilet Cleaning: ಇನ್ಮುಂದೆ ಶಾಲೆಗಳಲ್ಲಿ ಮಕ್ಕಳನ್ನು ಟಾಯ್ಲೆಟ್‌ ಕ್ಲೀನಿಂಗ್‌ಗೆ ಬಳಸುವಂತಿಲ್ಲ; ಮಹತ್ವದ ಆದೇಶ

ಪೆನ್ನು ಬದಲು ಪೊರಕೆ ಕೊಟ್ಟ ಶಿಕ್ಷಕರು

ಘಟನೆ-1 ಜನವರಿ 28, 2023 ಹನೂರಿನ ಕೌದಳ್ಳಿ ಸರ್ಕಾರಿ ಶಾಲೆ

ಚಾಮರಾಜನಗರದ ಹನೂರು ತಾಲೂಕು ಕೌದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕೈದು ಹೆಣ್ಣು ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದ ಘಟನೆ ನಡೆದಿತ್ತು. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ (viral video) ಆಗಿತ್ತು. ಶಾಲೆಗೆ ಓದಲು ಕಳುಹಿಸಿದರೆ ನೀವು ಅವರಿಂದ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನೆ ಮಾಡಿದ್ದರು. ಇದರಿಂದ ಕೆಲಕಾಲ ಗಲಿಬಿಲಿಗೊಂಡ ಶಿಕ್ಷಕರು ಬಳಿಕ, ವಿದ್ಯಾರ್ಥಿಯೇ ಅಲ್ಲಿ ಗಲೀಜು ಮಾಡಿದ್ದ. ಹೀಗಾಗಿ ಆತನಿಂದಲೇ ಅದನ್ನು ಸ್ವಚ್ಛತೆ ಮಾಡಿಸುತ್ತಿದ್ದೆವು ಎಂದು ಸಮಜಾಯಿಷಿ ನೀಡಿದ್ದರು.

ಘಟನೆ-2 ಡಿಸೆಂಬರ್‌ 17, 2023 ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣ ನಡೆದಿತ್ತು. ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಐವರು ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲಾಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಘಟನೆ-3 ಡಿಸೆಂಬರ್‌ 22, 2023- ಅಂದರಹಳ್ಳಿ ಸರ್ಕಾರಿ ಶಾಲೆ

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ್ದರು. ಇಲ್ಲಿ ಮಕ್ಕಳೇ ಶೌಚಾಲಯವನ್ನು ಕ್ಲೀನ್ ಮಾಡಬೇಕು. ಅಲ್ಲದೆ, ಮಕ್ಕಳೇ ಶಿಕ್ಷಕರು ಊಟ ಮಾಡುವ ತಟ್ಟೆ ತೊಳೆಯಬೇಕು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿತ್ತು.

ಘಟನೆ-4 ಡಿಸೆಂಬರ್‌ 28, 2023 ನೇರಲೆಕೆರೆ ಸರ್ಕಾರಿ ಶಾಲೆ

ಶಿವಮೊಗ್ಗದ ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ ಗ್ರಾ.ಪಂ ಗುಡ್ಡದ ನೇರಲೆಕೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಂದ ಟ್ಲಾಯೆಟ್‌ ಕ್ಲೀನಿಂಗ್‌ ಮಾಡಿಸಲಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಗೆ ಪೊರೆಕೆ ನೀಡಿ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದರು. ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಘಟನೆ- ಜನವರಿ 14, 2024, ಮೌಲಾನಾ ಆಜಾದ್ ಮಾಡೆಲ್‌ ಸ್ಕೂಲ್‌

ಕಲಬುರಗಿಯಲ್ಲಿ ಖಾಸಗಿ ಶಾಲೆ (Kalaburagi Private School) ಮುಖ್ಯ ಶಿಕ್ಷಕಿಯೊಬ್ಬರು (headmistress) ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲಿನಿಂಗ್‌ ಹಾಗೂ ಕಸ ಗುಡಿಸಲು ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಶಾಲೆಯಲ್ಲಿ ಅಷ್ಟೆ ಅಲ್ಲದೆ, ಈ ಮುಖ್ಯ ಶಿಕ್ಷಕಿಯು ತನ್ನ ಮನೆಯಲ್ಲೂ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ದೂರು ದಾಖಲಾಗಿತ್ತು. ಕಲಬುರಗಿಯ ಮೌಲಾನಾ ಆಜಾದ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಘಟನೆ ನಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version