Site icon Vistara News

Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!

Elephant attack chikkamagaluru

ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ಅರೆನೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ (Elephant attack) ವೃದ್ಧ ಬಲಿಯಾಗಿದ್ದಾರೆ. ದುರ್ಗಾ ಕಿನ್ನಿ (60) ಎಂಬುವವರು ಕಾಡಾನೆ ದಾಳಿಗೆ ಮೃತಪಟ್ಟವರು.

ದುರ್ಗಾ ಅವರು ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಕಾಡಾನೆ ಎದುರಾಗಿದೆ. ಗಾಬರಿಗೊಂಡು ಕಾಡಾನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಓಡಲು ಆಗದೆ ಕಾಡಾನೆಯು ದುರ್ಗಾಅವರನ್ನು ತುಳಿದು ಹಾಕಿದೆ. ಕಾಡಾನೆ ದಾಳಿಗೆ ಗಂಭೀರ ಗಾಯಗೊಂಡ ದುರ್ಗಾ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಲ್ದೂರು ವಲಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚಿಕ್ಕಮಗಳೂರಲ್ಲಿ 7 ಕ್ಕೂ ಹೆಚ್ಚು ಸಾವು

ಚಿಕ್ಕಮಗಳೂರಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ ದಾಳಿಗೆ ಚಿಕ್ಕಮಗಳೂರಿನಲ್ಲಿ ಒಂದೇ ವರ್ಷದಲ್ಲಿ ಏಳಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುವಂತೆ ಕೋರಿದ್ದಾರೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಹೊರನಾಡಿನ ಮುಂಡುಗನಮನೆ ಗ್ರಾಮದಲ್ಲಿ ಒಂಟಿ ಸಲಗವೊಂದು ಹಿಂದೊಮ್ಮೆ ಕಾಣಿಸಿಕೊಂಡಿತ್ತು. ಮರೆಸೀಕೆರೆ ಗ್ರಾಮ, ಮುಂಡುಗನಮನೆ ಗ್ರಾಮ, ನಂದಿಬಟ್ಲು ಗ್ರಾಮದ ಸುತ್ತಮುತ್ತ ಕಾಡಾನೆಗಳು ಆಗಾಗ ಪ್ರತ್ಯಕ್ಷವಾಗುತ್ತಲೆ ಇವೆ.

ಇದನ್ನೂ ಓದಿ: Wild animals Attack : ಕೂಡ್ಲಿಗಿ ಮುಖ್ಯರಸ್ತೆಯಲ್ಲೇ ಕರಡಿ ಕುಣಿತ! ಚಿತ್ತಾಪೂರದಲ್ಲಿ ಚಿರತೆ ಓಡಾಟ

ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!

ಗಾಯಗೊಂಡು ನರಳಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಮುಂದಾದ ಅರಣ್ಯ ಸಿಬ್ಬಂದಿ ಮೇಲೆ ಮೇಲೆ ದಾಳಿ (Elephant attack) ಮಾಡಿತ್ತು. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ನಿಂತಿದ್ದ ಕಾಡಾನೆಗೆ ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿ ಕೊಂದಿತ್ತು.

ಭೀಮ ಹೆಸರಿನ ಕಾಡಾನೆಯು ಈವರೆಗೆ ಯಾರ ಮೇಲೂ ದಾಳಿ ಮಾಡದೆ ಸೌಮ್ಯ ಸ್ವಭಾವ ಹೊಂದಿತ್ತು. ಆದರೆ ಗಾಯಗೊಂಡಿದ್ದ ಕಾಡಾನೆ ಭೀಮನಿಗೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿ ವೆಂಕಟೇಶ್‌ ಅವರನ್ನು ಅಟ್ಟಾಡಿಸಿಕೊಂಡು ಹೋಗಿ, ಸೊಂಡಿಲಿನಿಂದ ಎತ್ತಿ ಎಸೆದಿತ್ತು. ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜತೆ ವೆಂಕಟೇಶ್‌ ತೆರಳಿದ್ದರು. ಈ ಹಿಂದೆ ಹತ್ತಾರು ಆನೆ ಸೆರೆಹಿಡಿಯುವಾಗ ಅರವಳಿಕೆ ಮದ್ದು ನೀಡಿದ್ದರು.

ಇಲಾಖೆಯ ನಿರ್ಲಕ್ಷ್ಯವೇ ನಮ್ಮ ತಂದೆ ಸಾವಿಗೆ ಕಾರಣ

ಕಾಡಾನೆ ಕಾರ್ಯಾಚರಣೆ ‌ವೇಳೆ ಸಿಬ್ಬಂದಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ‌ಪುತ್ರ ಮೋಹನ್‌ ಡಿಎಫ್‌ಓಗೆ ತರಾಟೆ ತೆಗೆದುಕೊಂಡಿದ್ದರು. ವೆಂಕಟೇಶ್‌ ಅವರ ಮೃತದೇಹ ನೋಡಲು ಆಸ್ಪತ್ರೆ ಶವಾಗಾರಕ್ಕೆ ಬಂದಾಗ ಕಿಡಿಕಾರಿದ್ದರು. ಇಲಾಖೆಯಲ್ಲಿ ಶಿಸ್ತು ಕ್ರಮ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಯಾವುದೇ ಮುಂಜಾಗ್ರತಾ ಕ್ರಮವಹಿಸಿಲ್ಲ. 67 ವರ್ಷದ ನಮ್ಮ ತಂದೆಯನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದೀರಿ. ನಮ್ಮ ತಂದೆಯನ್ನು ಬಿಟ್ಟು ಬೇರೆ ಯಾರೊಬ್ಬರಿಗೂ ಇಲ್ಲಿಯವರೆಗೆ ತರಬೇತಿ ನೀಡಿಲ್ಲ. ನಿಮ್ಮ ಇಲಾಖೆಯ ನಿರ್ಲಕ್ಷ್ಯವೇ ನಮ್ಮ ತಂದೆ ಸಾವಿಗೆ ಕಾರಣ. ಇದು ಅರಣ್ಯ ಇಲಾಖೆಗೆ ನಾಚಿಕೆಗೇಡು, ಇನ್ನು ಮುಂದಾದರೂ ಸರಿಯಾಗಿ ಕ್ರಮ ವಹಿಸಿ ಎಂದು ಮೋಹನ್‌ ಆಕ್ರೋಶ ಹೊರಹಾಕಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version